ಕಾರವಾರ: ಶಿರೂರು ಗುಡ್ಡ ಕುಸಿತದ ಬಳಿಕ ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಾಣೆಯಾಗಿರುವ ಜಗನ್ನಾಥ ಪುತ್ರಿ ಕೃತಿಕಾ ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಹೆಚ್ ಡಿ ಕುಮಾರಸ್ವಾಮಿ ಅವರು ಜಗನ್ನಾಥ ಪುತ್ರಿ ಕೃತಿಕಾ ಅವರಿಗೆ ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್ಇಎಲ್ ನಲ್ಲಿ ಉದ್ಯೋಗ ಕೊಡಿಸಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ಕೃತಿಕಾ ಅವರಿಗೆ ದೂರವಾಣಿ ಕರೆ ಮಾಡಿ ಉದ್ಯೋಗ ಖಾತರಿಪಡಿಸಿದ್ದಾರೆ.
ಜಗನ್ನಾಥ ಅವರ ಇನ್ನೋರ್ವ ಪುತ್ರಿ ಪಲ್ಲವಿ ನಾಯ್ಕ ಅವರಿಗೆ ಕಳೆದವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ರಾಜ್ಯ ಸರ್ಕಾರ ನೌಕರಿ ನೀಡಿತ್ತು.
ಇದೇ ವರ್ಷ ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಗುಡ್ಡ ಕುಸಿತದಲ್ಲಿ 11 ಮಂದಿ ಕಾಣೆಯಾಗಿದ್ದು, ಎಂಟು ಜನರ ಶವ ಪತ್ತೆಯಾಗಿದ್ದರು.