ಮನೆ ರಾಜ್ಯ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿಕೂಟ (ಎನ್ ಡಿಎ) ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು, ಬಿಜೆಪಿ ಹಿರಿಯ ನಾಯಕರೂ ಆಗಿರುವ ಎಸ್.ಎಂ.ಕೃಷ್ಣ ಅವರನ್ನು ಸೌಹಾರ್ದ ಭೇಟಿ ಮಾಡಿ ಮಾತುಕತೆ ನಡೆಸಿದರು.

Join Our Whatsapp Group

ಸೋಮವಾರ ಸಂಜೆ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರೊಂದಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಶ್ರೀ ಪುಟ್ಟರಾಜು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಇಂಡುವಾಳು ಸಚ್ಚಿದಾನಂದ, ಉಮೇಶ್ ಅವರು ಇದ್ದರು.

ಲೋಕಸಭೆ ಚುನಾವಣೆ ಹಾಗೂ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾಯಕರು ಮಾತುಕತೆ ನಡೆಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ ಅವರು; ಹಿರಿಯರಾದ ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಕೃಷ್ಣ ಅವರು ನಾಡಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮ ತಂದೆಯವರ ಸಮಕಾಲೀನರು. ತಂದೆಯವರಿಗಿಂತ ಆರು ತಿಂಗಳು ದೊಡ್ಡವರು. ನಾನು ನಾಮಪತ್ರ ಸಲ್ಲಿಸುವ ಮುನ್ನವೇ ಅವರ ಆಶೀರ್ವಾದ ಪಡೆಯಬೇಕಿತ್ತು. ಇವತ್ತು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.

ನಾನು ಪ್ರಥಮವಾಗಿ ರಾಜಕೀಯಕ್ಕೆ ಸ್ಪರ್ಧೆ ಮಾಡಿದಾಗ ಕೃಷ್ಣ ಅವರು ಆಶೀರ್ವಾದ ಮಾಡಿದ್ದರು. ಆ ಸಂಗತಿಯನ್ನು ಮಾತುಕತೆಯ ವೇಳೆ ಹಿರಿಯರಾದ ಕೃಷ್ಣ ಅವರೇ ನೆನೆಸಿಕೊಂಡರು. ನನ್ನನ್ನು ಆಶೀರ್ವಾದ ಮಾಡಿ ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದರು ಕುಮಾರಸ್ವಾಮಿ ಅವರು.

ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

ಸಿಎಂ ಸಭೆಯಲ್ಲಿ ಭದ್ರತಾ ಲೋಪ ಆಗಬಾರದು

ಚುನಾವಣೆಯ ಪ್ರಚಾರದ ರೋಡ್ ಶೋ ಕಾರ್ಯಕ್ರಮದಲ್ಲಿ ಪಿಸ್ತೂಲು ಹೊಂದಿದ್ದ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಅವರಿಗೆ ಸನ್ಮಾನ ಮಾಡಿರುವ ಘಟನೆ ಭದ್ರತಾ ಲೋಪ. ಇಂಥ ಅಚಾತುರ್ಯ ನಡೆಯಬಾರದಿತ್ತು ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು; ಇಲ್ಲಿ ಯಾರು ಯಾರನ್ನೂ ತಪಾಸಣೆ ಮಾಡಲ್ಲ. ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆಗಬಾರದು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ನಾನು ಎಲ್ಲು ಕಾಣೆ ಆಗಿಲ್ಲ, ನಾನು ಇಲ್ಲೇ ಇದ್ದೀನಿ

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರಿಗೆ ಉತ್ತರ ನೀಡಲು ನಾವು ಸಮರ್ಥನಿದ್ದೇನೆ. ನಾನು ಎಲ್ಲೂ ಕಾಣೆ ಆಗಿಲ್ಲ. ನಾನು ಇಲ್ಲೇ ಇದ್ದೇನೆ. ಈ ರೀತಿ ಅಪಪ್ರಚಾರ ಮಾಡಿ ಚುನಾವಣೆ ಯಶಸ್ವಿ ಆಗಲ್ಲ. ಅವರು ಇಂಥ ಪರೋಕ್ಷವಾಗಿ ಸೆಣಸುವ ಬದಲು ನೇರವಾಗಿ ಚುನಾವಣೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.