ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ನಡೆಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ. “ನಾನು ಈ ರಾಜ್ಯದ ಸಿಎಂ, ಕಾರ್ಯಕ್ರಮ ವಿಧಾನಸೌಧದಲ್ಲಿ ಆಗ್ಬೇಕು” ಎಂಬ ಸಿದ್ದರಾಮಯ್ಯ ಅವರ ಒತ್ತಡವೇ ಪೊಲೀಸ್ ವ್ಯವಸ್ಥೆಗೆ ಅಡಚಣೆಯಾಯಿತು, ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿತು ಎಂದು ಅವರು ಆರೋಪಿಸಿದ್ದಾರೆ.
ಈಗ ಸರ್ಕಾರವೇ ನೇರ ಹೊಣೆ ಹೊರಬೇಕು. ಸರ್ಕಾರ ಅನುಮತಿ ನೀಡಿ ಈಗ ಅಧಿಕಾರಿಗಳ ಮೇಲೆ ಎತ್ತಿ ಹಾಕುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದರು.
ನಗರದ ಖಾಸಗಿ ಹೋಟೆಲಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರವು ಅಧಿಕಾರ ದುರ್ಬಳಕೆ ಮಾಡಿದ್ದು, ಅಭಿಮಾನಿಗಳ ಜೀವದ ಜೊತೆ ಆಟವಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಎಸ್‌ಸಿಎ ಜೂನ್ 3ನೇ ತಾರೀಖು ಸರ್ಕಾರದ ಡಿಪಿಎಆರ್‌ಗೆ ವಿನಂತಿ ಸಲ್ಲಿಸಿ, ಆರ್‌ಸಿಬಿ ಗೆದ್ದ ಬಳಿಕ ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಬೇಕೆಂದು ಕೇಳಿಕೊಂಡಿತ್ತು. ಆದರೆ ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ ಕಾರ್ಯಕ್ರಮವಿತ್ತು. ಈ ಎರಡು ಕಡೆಗಳಲ್ಲೂ ಪ್ರಾಶಸ್ತ್ಯ ನೀಡಬೇಕಾಗಿದ್ದರೆ, ಸರ್ಕಾರ ಆಳವಾದ ಚಿಂತನೆ ಮಾಡಬೇಕಿತ್ತು.
ಪೊಲೀಸ್ ಆಯುಕ್ತರು “ಒಂದು ವೇಳೆ ಮಾತ್ರ ಭದ್ರತೆ ನೀಡಬಹುದು” ಎಂದು ಸ್ಪಷ್ಟಪಡಿಸಿದರೂ, ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಮೂಲಕ ಒತ್ತಡ ಹೆಚ್ಚಾಗಿ, “ನಾನು ಈ ರಾಜ್ಯದ ಸಿಎಂ, ಭದ್ರತೆ ಕೊಡಬೇಕು” ಎಂಬ ನಿರ್ಧಾರ ಕಮಿಷನರ್‌ಗೇ ಸೂಚಿಸಲಾಗಿದೆ. ಈ ವೇಳೆ ಹೆಚ್ಚಿನ ಭದ್ರತೆಯನ್ನು ವಿಧಾನಸೌಧದ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ.
ಹೆಚ್‌ಡಿಕೆ ಆರೋಪಿಸಿದಂತೆ, ಡಿಸಿಎಂ ಡಿಕೆ ಶಿವಕುಮಾರ್ ತಾವೇ ತಂಡವನ್ನು ಗೆಲ್ಲಿಸಿ ತಂದವರಂತೆ ವರ್ತಿಸಿ, ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿಯೇ ಆರ್‌ಸಿಬಿ ತಂಡಕ್ಕೆ ಶಾಲು, ಮೈಸೂರು ಪೇಟಾ ಹಾಕಿ ಸನ್ಮಾನಿಸಿದ್ದಾರೆ. “ವಿಧಾನಸೌಧದಲ್ಲಿ ಶಾಲು ಇಲ್ಲ ಅಂತ ಪರದಾಡಿದ ಪ್ರಸಂಗವೂ ನಡೆದಿದೆ” ಎಂದು ವ್ಯಂಗ್ಯವಾಡಿದರು.
ಕಾಲ್ತುಳಿತದಲ್ಲಿ ಅಭಿಮಾನಿಗಳ ಸಾವಿನ ಸುದ್ದಿ ಮಧ್ಯಾಹ್ನವೇ ಬಂದಿದ್ದರೂ, ಸಂಜೆವರೆಗೆ ಕಾರ್ಯಕ್ರಮ ಮುಂದುವರಿದದ್ದು ನಿರ್ಲಕ್ಷ್ಯದ ತೀವ್ರ ರೂಪವೇ ಎಂದು ಹೆಚ್‌ಡಿಕೆ ತೀವ್ರವಾಗಿ ಟೀಕಿಸಿದರು. ಎರಡು ಕಡೆ ಕಾರ್ಯಕ್ರಮಕ್ಕೆ ಯಾರ ಅನುಮತಿ ಇತ್ತು? ಅಭಿಮಾನಗಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಿದೆ. ಇಷ್ಟೆಲ್ಲ ಸಾವು ನೋವಾದರೂ ಸಂಜೆ ಸಿಎಂ ಮೊಮ್ಮಗನ ಜತೆ ಹೊಟೇಲಿಗೆ ಮಸಾಲೆ ದೋಸೆ ಸವಿಯಲು ಹೋಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಾನಮರ್ಯಾದೆ ಇದೆಯಾ? ಈ ಎಲ್ಲಾ ಪ್ರಕರಣಕ್ಕೂ ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.














