ಬೆಂಗಳೂರು: ಎಫ್ಎಸ್ಐಡಿ- ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಪಾಲಿಮರ್ ಸೆಲೆಕ್ಟಿವ್ ಲೇಸರ್ ಸಿಂಟರಿಂಗ್ (ಎಸ್ಎಲ್ಎಶ್) 3ಡಿ ಪ್ರಿಂಟರ್ ಅಪೋಲೋ 350 ಎಸ್ಎಲ್ಎಸ್ ಅನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ಭಾರತದ ಅತಿದೊಡ್ಡ ಮೆಷಿನ್ ಟೂಲ್ ಎಕ್ಸ್ ಪೋ ಐಎಂಟೆಇಎಕ್ಸ್ 2025ರಲ್ಲಿ ಈ ಉತ್ಪನ್ನವನ್ನು ಅನಾವರಣಗೊಳಿಸಲಾಗಿದ್ದು, ಈ ಪ್ರಿಂಟರ್ ಅನ್ನು ಎಂಎಚ್ ಐ ಹಂತ-IIರ ಕ್ಯಾಪಿಟಲ್ ಗೂಡ್ಸ್ ಸ್ಕೀಮ್ ಅಡಿಯಲ್ಲಿ ಫ್ರಾಕ್ಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಫ್ಎಸ್ಐಡಿ-ಐಐಎಸ್ಸಿಯ ಕೋರ್ ಲ್ಯಾಬ್ಸ್ ನ ಮುಖ್ಯ ಕಾರ್ಯನಿರ್ವಾಹಕ ಓಂಪ್ರಕಾಶ್ ಸುಬ್ಬರಾವ್, ಎಂಎಚ್ಐ ಕ್ಯಾಪಿಟಲ್ ಗೂಡ್ಸ್ ಸ್ಕೀಮ್ ಅಡಿಯಲ್ಲಿ ಎಫ್ಎಸ್ಐಡಿ-ಐಐಎಸ್ಸಿ ಘಟಕದಲ್ಲಿ ಕೈಗಾರಿಕಾ ದರ್ಜೆಯ ಪಾಲಿಮರ್ ಪ್ರಿಂಟರ್ ಅನ್ನು ಅಭಿವೃದ್ಧಿಪಡಿಸಿದ್ದಕ್ಕೆ ನಮಗೆ ಅಪಾರ ಹೆಮ್ಮೆ ಇದೆ. ನಾವು ಇಲ್ಲಿಯೇ ಈ ಪ್ರಿಂಟರ್ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ತಯಾರಿಸಿದ್ದೇವೆ. ಈ ಸಾಧನೆಯು ಸಂಕೀರ್ಣ ತಂತ್ರಜ್ಞಾನವನ್ನು ತಯಾರಿಸುವ ನಮ್ಮ ಶಕ್ತಿ ಸಾಮರ್ಥ್ಯದ ಪ್ರದರ್ಶನ ಎಂದರೂ ತಪ್ಪಿಲ್ಲ. ಈ ಮೂಲಕ ಭಾರತದ ಉತ್ಪಾದನಾ ಕ್ಷೇತ್ರದ ಸಾಮರ್ಥ್ಯವನ್ನು ಆಧುನಿಕಗೊಳಿಸಲು ನಾವು ಸಂತೋಷ ಪಡುತ್ತೇವೆ ಎಂದು ಹೇಳಿದರು.
ಫೌಂಡೇಶನ್ ಫಾರ್ ಸೈನ್ಸ್, ಇನ್ನೋವೇಶನ್ ಮತ್ತು ಡೆವಲಪ್ಮೆಂಟ್ (ಎಫ್ಎಸ್ಐಡಿ) ಕೋರ್ ಲ್ಯಾಬ್ಸ್ ಮತ್ತು ಫ್ರ್ಯಾಕ್ಟಲ್ ವರ್ಕ್ಸ್ ನ ಉದ್ಯಮ ಪರಿಣತಿಯು ಈ ಉತ್ಪನ್ನವನ್ನು ತಯಾರಿಸಲು ನೆರವಾಗಿದೆ. ಅಪೋಲೋ 350 ಎಸ್ಎಲ್ಎಸ್ ಪ್ರಿಂಟರ್ ಉನ್ನತ ಸ್ಥಿರತೆಯ ಸಿಓ₂ ಲೇಸರ್ ಗಳು, ನಿಖರವಾದ ಸ್ಕ್ಯಾನಿಂಗ್ ವ್ಯವಸ್ಥೆ ಮತ್ತು ಅತ್ಯಾಧುನಿಕ ಪ್ರೀಹೀಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಅತ್ಯಾಧುನಿಕ ಉತ್ಪನ್ನವು ಬಾರತದ ಅಡಿಟಿವ್ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಮಾನದಂಡವನ್ನು ಹಾಕಿಕೊಡಲಿದೆ. ಈ ಉತ್ಪನ್ನವನ್ನು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಐಐಎಸ್ಸಿಯಲ್ಲಿ ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ.