ಮಂಡ್ಯ : ಕಾಂಗ್ರೆಸ್ ಮತ್ತು ಹೆಚ್‌ಡಿಕೆ ನಡುವೆ ನಡೆಯುತ್ತಿದ್ದ ಕೈಗಾರಿಕಾ ಫೈಟ್ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಜಿಲ್ಲೆಗೆ ಕೈಗಾರಿಕೆ ತರಲು ಜಿಲ್ಲೆಯಲ್ಲಿ ಭೂಮಿ ಇಲ್ಲ ಎನ್ನುತ್ತಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮಂಡ್ಯದ ಶಾಸಕ ಗಣಿಗ ರವಿಕುಮಾರ್ ಸವಾಲು ಹಾಕಿದ್ದಾರೆ. ಖುದ್ದು ಜಿಲ್ಲಾಧಿಕಾರಿ ಜೊತೆ ಜಾಗ ಪರಿಶೀಲನೆ ಮಾಡಿ ಭೂಮಿ ಇದೆ, ಇಂಡಸ್ಟ್ರಿ ಯಾವಾಗ ತಾರ್ತೀರಾ ಅಂತ ಪ್ರಶ್ನೆ ಮಾಡಿದ್ದಾರೆ.
ಮಂಡ್ಯ 2024 ರ ಲೋಕಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣವಾಗಿತ್ತು. ಜಿಲ್ಲೆಯಲ್ಲಿ 7 ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಭಾರೀ ಬಹುಮತದಿಂದ ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾದ್ರು, ಜೊತೆಗೆ ಕೇಂದ್ರ ಸಚಿವರು ಆದ್ರು. ಇದರಿಂದ ಸಹಜವಾಗಿ ಜಿಲ್ಲೆಗೆ ಕೇಂದ್ರದಿಂದ ಸಾಕಷ್ಟು ಅನುದಾನ ಬರುವ ನಿರೀಕ್ಷೆ ಕೂಡ ಬೆಟ್ಟದಷ್ಟಿದೆ. ಈ ನಡುವೆ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡ್ತಿನಿ ಅನ್ನೋ ಭರವಸೆಯನ್ನ ಹೆಚ್.ಡಿ.ಕೆ ಕೊಟ್ಟಿದ್ರು. ಈ ಭರವಸೆ ವರ್ಷವಾದ್ರು ಈಡೇರಲಿಲ್ಲ. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ನಾಯಕರು ಟೀಕೆ ಶುರುಮಾಡಿದ್ರು. ಈ ವೇಳೆ ಎಚ್ಚೆತ್ತುಕೊಂಡ ಹೆಚ್.ಡಿ.ಕೆ ಕಾಂಗ್ರೆಸ್ ವಿರುದ್ಧವೆ ಪ್ರತ್ಯಾಸ್ತ್ರ ಪ್ರಯೋಗ ಮಾಡಿದರು.
ನಾನು ಇಂಡಸ್ಟ್ರಿ ತರಲು ಸಿದ್ಧ ಆದ್ರೆ ರಾಜ್ಯ ಸರ್ಕಾರ ಸಹಕಾರ ಕೊಡ್ತಿಲ್ಲ, ಜೊತೆಗೆ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗವೇ ಇಲ್ಲ ಅಂತ ಹೇಳೋಕೆ ಶುರುಮಾಡಿದ್ರು. ಮತ್ತೊಂದೆಡೆ ನಮ್ಮಲ್ಲಿ ಸಿದ್ದಪಡಿಸಿದ ಭೂಮಿ ಇಲ್ಲ ಅಂತ ಸದನದಲ್ಲೂ ಉತ್ತರ ಕೊಟ್ಟಿದ್ದು ಹೆಚ್.ಡಿ.ಕೆಗೆ ಹಾಗೂ ಜೆ.ಡಿ.ಎಸ್ ನಾಯಕರಿಗೆ ಅಸ್ತ್ರವಾಗಿ ಹೋಗಿದೆ. ಇದೇ ವಿಚಾರ ಇಟ್ಟುಕೊಂಡು ಟೀಕೆ ಶುರುಮಾಡಿದರು.
ಇಂಡಸ್ಟ್ರಿಗೆ ಜಾಗ ಕೊಡ್ತಿನಿ ಅಂತ ಪದೇ ಪದೇ ಹೇಳ್ತಿದ್ದ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಇದೀಗಾ 100 ಎಕರೆ ಜಾಗವನ್ನ ಗುರುತು ಮಾಡಿ ಆ ಸ್ಥಳವನ್ನು ಜಿಲ್ಲಾಧಿಕಾರಿ ಜೊತೆಗೆ ಪರಿಶೀಲನೆ ಮಾಡಿದ್ದಾರೆ. ಮಂಡ್ಯದ ಸಾತನೂರು ಅಂದ್ರೆ ಎಕ್ಸ್‌ಪ್ರೆಸ್ ಹೈವೇಗೆ ಹೊಂದಿಕೊಂಡಂತೆ ಇರುವ ಕಾಡಾ ಜಾಗವನ್ನ ಕೊಡುತ್ತೇವೆ. ಸರ್ಕಾರಕ್ಕೆ ಸಂಬಂಧಪಟ್ಟ ಕಂಪನಿ ಅರ್ಜಿ ಹಾಕಿದ್ರೆ, ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು 100 ಎಕರೆ ಜಾಗ ಕೊಡಿಸುತ್ತೇನೆ. ಹೆಚ್ಚುವರಿ ಬೇಕಾದ್ರು ಭೂ ಸ್ವಾಧೀನ ಪಡಿಸಿಕೊಳ್ಳುತ್ತೇವೆ. ಈಗ ನೀವು ಯಾವಾಗ ಇಂಡಸ್ಟ್ರಿ ತರುತ್ತೀರ ಹೇಳಿ ಅಂತ ಹೆಚ್‌ಡಿಕೆ ಗಣಿಗ ರವಿಕುಮಾರ್ ಸವಾಲಾಕಿದ್ದಾರೆ. ಇಷ್ಟು ದಿನ ಕೇವಲ ಹೇಳಿಕೆಗಷ್ಟೇ ಸೀಮಿತವಾಗಿದ್ದ ಇಂಡಸ್ಟ್ರಿ ಫೈಟ್ ವಿಚಾರ ಮತ್ತೊಂದು ಹಂತ ತಲುಪಿದ್ದು, ಇದಕ್ಕೆ ಹೆಚ್.ಡಿ.ಕೆ ಉತ್ತರ ಸಾಕಷ್ಟು ಕುತೂಹಲ ಮೂಡಿಸಿದೆ.















