ಬೆಂಗಳೂರು: ಪ್ರಜ್ವಲ್ ಜೊತೆ ತನಗೆ ಹೆಚ್ಚಿನ ಒಡನಾಟವಿಲ್ಲ, ತಾನು ವಿರಳ ಸಂದರ್ಭಗಳಲ್ಲಿ ಮಾತ್ರ ಹಾಸನಕ್ಕೆ ಹೋಗೋದು, ವರ್ಷಕ್ಕೊಮ್ಮೆ ಹಾಸನಾಂಬೆಯ ದರ್ಶನಕ್ಕೆ ಹೋಗುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕುಟುಂಬದಲ್ಲಿ ಯಾರಿಗಾದರೂ ಸಲಹೆ ಕೊಡುವಷ್ಟು ದೊಡ್ಡವ ತಾನಲ್ಲ, ಆದರೆ ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಾತ ಮತ್ತು ಅಜ್ಜಿ ತುಂಬಾ ನೊಂದುಕೊಂಡಿದ್ದಾರೆ ಮತ್ತು ನೋವಲ್ಲಿದ್ದಾರೆ. ಈ ವಯಸ್ಸಲ್ಲಿ ಅವರಿಗೆ ಇಂಥ ಸ್ಥಿತಿ ಎದುರಾಗಿದ್ದಕ್ಕೆ ಮನಸ್ಸು ವ್ಯಾಕುಲಗೊಳ್ಳುತ್ತದೆ. ಹೆಚ್ಚು ಯೋಚನೆ ಮಾಡಬೇಡಿ, ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ ಅಂತ ಹೇಳಿದ್ದೇನೆ ಎಂದು ನಿಖಿಲ್ ಹೇಳಿದರು.
ಸಂತ್ರಸ್ತೆಯರ ಬಗ್ಗೆ ಯೋಚನೆ ಮಾಡಿದಾಗಲೂ ಮನಸ್ಸಿಗೆ ವ್ಯಥೆಯಾಗುತ್ತದೆ, ಕುಮಾರಸ್ವಾಮಿಯವರು ಇಷ್ಟರಲ್ಲೇ ಹಾಸನಕ್ಕೆ ಹೋಗಿ ಅಲ್ಲಿನ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸಂತ್ರಸ್ತೆಯರನ್ನು ಪತ್ತೆ ಮಾಡಿ ಅವರಲ್ಲಿ ಧೈರ್ಯ ತುಂಬುವಂತೆ ಹೇಳಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.