ನವದೆಹಲಿ(Newdelhi): ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಗುರುವಾರ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.
ಕಳೆದ 10 ದಿನಗಳಿಂದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿದೆ. ಗುರುವಾರದ ವಿಚಾರಣೆಯ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್, ಹಿರಿಯ ವಕೀಲರಾದ ದುಷ್ಯಂತ್ ದವೆ, ಸಲ್ಮಾನ್ ಖುರ್ಷಿದ್, ಸಂಜಯ್ ಹೆಗ್ಡೆ, ಹುಝೇಫಾ ಅಹ್ಮದಿ, ದೇವದತ್ ಕಾಮತ್, ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ ಮತ್ತಿತರರು ವಾದ ಮಂಡಿಸಿದರು.
ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು ಎಂದು ಕೋರಲಾಗಿದ್ದ ಎಲ್ಲಾ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾರ್ಚ್ 15ರಂದು ಸಾರಾಸಗಟಾಗಿ ತಿರಸ್ಕರಿಸಿದ್ದ ಹೈಕೋರ್ಟ್ನ ತ್ರಿಸದಸ್ಯ ಪೀಠ, ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಸಂಶಯ ವ್ಯಕ್ತಪಡಿಸಿತ್ತು.
ಹಿಜಾಬ್ ಇಸ್ಲಾಂನ ಅತ್ಯಾವಶ್ಯಕ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ಅಂತೆಯೇ ಇಸ್ಲಾಂ ಧರ್ಮದ ಅನುಸಾರ ಹಿಜಾಬ್ ಅತ್ಯಾವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನಿನಲ್ಲಿ ಯಾವುದೇ ಅಧಿಕೃತ ಆಧಾರವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿದಾರರು, ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಸಮವಸ್ತ್ರ ರೂಪಿಸಿ ಕರ್ನಾಟಕ ಸರ್ಕಾರ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಿಲ್ಲ. ಹಾಗಾಗಿ, ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶಿಸಿರುವುದು ಸರಿಯಲ್ಲ. ಹಿಜಾಬ್ ಧರಿಸುವುದನ್ನು ಸಂವಿಧಾನದ ಅಡಿ ಖಾತರಿಪಡಿಸಲಾದ ಗೌಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಆದರೆ, ಅದನ್ನು ಅರಿಯದೇ ಹೈಕೋರ್ಟ್ ಪ್ರಮಾದವೆಸಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.