ಬಾಗಲಕೋಟೆ: ಆಟವಾಡುತ್ತಿದ್ದ ವೇಳೆ ಪಕ್ಕದ ಮನೆಯ ಸಂಪ್ ಗೆ ಬಿದ್ದು 18 ತಿಂಗಳ ಮಗು ಮೃತಪಟ್ಟ ಘಟನೆ ಬಾಗಲಕೋಟೆ ನಗರದ ಸೆಕ್ಟರ್ ನಂಬರ್ 38ರಲ್ಲಿ ನಡೆದಿದ್ದು, ಮಗಳು ಮತ್ತೆ ಜೀವಂತವಾಗಬಹುದು ಎಂಬ ನಂಬಿಕೆಯಿಂದ ಪೋಷಕರು ಆಕೆಯ ಮೃತದೇಹವನ್ನು ಉಪ್ಪಿನ ರಾಶಿಯ ಮಧ್ಯೆ ಇರಿಸಿದ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಮೃತ ಬಾಲಕಿ ಅಮೀನಾ ಸಾವಿನಿಂದ ಆಘಾತಕ್ಕೊಳಗಾದ ಪೋಷಕರು, ಉಪ್ಪಿನಲ್ಲಿ ಮೃತದೇಹವನ್ನು ಇರಿಸಿದರೆ ಮಗು ಪುನಃ ಬದುಕಿ ಬರುತ್ತದೆ ಎಂಬ ನಂಬಿಕೆಯಿಂದ ಸುಮಾರು ಎರಡು ಗಂಟೆಗಳ ಕಾಲ ದೇಹವನ್ನು ಉಪ್ಪಿನೊಳಗೆ ಇಟ್ಟಿದ್ದರು.

ಇದೇ ವೇಳೆ ಮಗುವಿನ ಕಿವಿಯ ಬಳಿ ಮೊಬೈಲ್ ಮೂಲಕ ಕುರಾನ್ ಪಠಣವನ್ನು ಕೇಳಿಸುತ್ತಾ ಪ್ರಾರ್ಥನೆಯನ್ನೂ ಸಲ್ಲಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೈದ್ಯರು, ಈ ರೀತಿಯ ಕ್ರಮಗಳಿಂದ ಮಗು ಜೀವಂತವಾಗುವುದಿಲ್ಲ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ದುಃಖದ ವಾತಾವರಣದಲ್ಲೇ ಪೋಷಕರು ತಮ್ಮ ಮಗಳ ಅಂತ್ಯಕ್ರಿಯೆಯನ್ನು ನೆರವೇರಿಸಿದರು.














