ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗಧಾಮ ಕೆರೆನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಮನಕಲುಕುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಮೃತರು:
- ತಾಯಿ: ಲಾವಣ್ಯ (30)
- ಮಗಳು: ನಿಹಾರಿಕಾ (10)
- ಮಗಳು: ನೇಹಾ (6)
ಇವರು ಬಾಧಗಾನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಮೂಲಗಳ ಪ್ರಕಾರ, ಲಾವಣ್ಯ ಅವರ ಪತಿ ಜಯಣ್ಣನೊಂದಿಗೆ ನಿನ್ನೆ ಮಕ್ಕಳ ಭವಿಷ್ಯದ ಕುರಿತ ಚರ್ಚೆಯಲ್ಲಿ ಕಲಹ ಸಂಭವಿಸಿದ್ದು, ಪತಿ ಏರ್ಪೋರ್ಟ್ ಡ್ರೈವರ್ ಕೆಲಸಕ್ಕೆ ಹೋಗಬೇಕೆಂದು ಒತ್ತಡ ತಂದಿರುವುದಾಗಿ ಹೇಳಲಾಗಿದೆ. ಈ ವಿಷಯದ ಬಗ್ಗೆ ವಾಗ್ವಾದ ಉಂಟಾಗಿದ್ದು, ಲಾವಣ್ಯ ಮನನೊಂದು ಈ ತೀರ್ಮಾನ ತೆಗೆದುಕೊಂಡಿರಬಹುದೆಂದು ಶಂಕಿಸಲಾಗಿದೆ.
ನಿನ್ನೆ ಸಂಜೆಯಿಂದಲೇ ತಾಯಿ ಮತ್ತು ಮಕ್ಕಳು ಕಾಣದಾಗಿದ್ದು, ಇಂದು ಬೆಳಿಗ್ಗೆ ಗ್ರಾಮಸ್ಥರು ಕೆರೆಯಲ್ಲಿ ತೇಲುತ್ತಿರುವ ಮೃತದೇಹಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಮೂರು ಮೃತದೇಹಗಳನ್ನು ಹೊರತೆಗೆದರು. ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಪತ್ನಿ ಮತ್ತು ಇಬ್ಬರು ಮುದ್ದಾದ ಮಕ್ಕಳನ್ನು ಕಳೆದುಕೊಂಡ ಜಯಣ್ಣನ ದುಃಖ ಮುಗಿಲುಮುಟ್ಟಿತ್ತು. ಘಟನೆಯ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.














