ಮನೆ ಸುದ್ದಿ ಜಾಲ ಮಧ್ಯಪ್ರಾಚ್ಯದ ಯುದ್ಧದ ಬಿಸಿ – ನಂದಿನಿ ಅಕ್ವಾ, ಐಸ್‌ಕ್ರೀಂ ಪೂರೈಕೆ ಸ್ಥಗಿತ..!

ಮಧ್ಯಪ್ರಾಚ್ಯದ ಯುದ್ಧದ ಬಿಸಿ – ನಂದಿನಿ ಅಕ್ವಾ, ಐಸ್‌ಕ್ರೀಂ ಪೂರೈಕೆ ಸ್ಥಗಿತ..!

0

ಕೋಲಾರ : ಮಧ್ಯಪ್ರಾಚ್ಯದ ಯುದ್ಧದ ಬಿಸಿ ರಾಜ್ಯದ ಪ್ರತಿಷ್ಠಿತ ನಂದಿನಿ ಉತ್ಪನ್ನಗಳಿಗೂ ತಟ್ಟಿದೆ. ತೀವ್ರ ಬೇಡಿಕೆ ಇದ್ದರೂ ಗ್ರಾಹಕರಿಗೆ ನಂದಿನಿ ಅಕ್ವಾ ಹಾಗೂ ಐಸ್‌ಕ್ರೀಂ ಪೂರೈಕೆ ಸ್ಥಗಿತಗೊಂಡಿದೆ. ಕೋಲಾರದ ನಂದಿನಿ ಹಾಲಿನ ಬೂತ್‌ಗಳಲ್ಲಿ ನಂದಿನಿ ಅಕ್ವಾ ವಾಟರ್ ಬಾಟಲ್ ಇಲ್ಲದೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ನಂದಿನಿ ಉತ್ಪನ್ನಗಳಿಗೆ ರಾಜ್ಯದಲ್ಲಿ ಮಾತ್ರ ಅಲ್ಲದೆ ದೇಶದಲ್ಲಿ ಸಾಕಷ್ಟು ಬೇಡಿಕೆಯಿರುವುದರಿಂದ ಹಾಲಿನ ಜೊತೆಗೆ ಕೆಎಂಎಫ್ ಐಸ್ ಕ್ರೀಂ, ಪೇಡಾ, ಮೈಸೂರು ಪಾಕ್, ಧಾರವಾಡ ಪೇಡಾ ಸೇರಿದಂತೆ ನಾನಾ ಬಗೆಯ ಪ್ರಾಡಕ್ಟ್‌ಗಳನ್ನು ಮಾಡಿಕೊಂಡು ಬರುತ್ತಿದೆ.

ಹೀಗಿರುವಾಗ ನಂದಿನಿ ಉತ್ಪನ್ನಗಳಲ್ಲಿ ಒಂದಾದ ನಂದಿನಿ ಅಕ್ವಾ ನೀರಿನ ಬಾಟಲಿಗಳಿಗೂ ಸಹ ಹೆಚ್ಚಿನ ಬೇಡಿಕೆಯಿದೆ. ಆದ್ರೆ ಕಳೆದ 15 ದಿನಗಳಿಂದ ನಂದಿನಿ ಅಕ್ವಾ ನೀರಿನ ಪ್ರಾಡಕ್ಟ್ ಪೂರೈಕೆ ಕಡಿಮೆಯಾಗಿದೆ. ನೀರಿನ ಬಾಟಲಿಗೆ ಬೇಕಾದ ಪ್ಲಾಸ್ಟಿಕ್ ಬಾಟಲ್ ಹಾಗೂ ಐಸ್ ಕ್ರೀಂ ಕಪ್ ಕೆಎಂಎಫ್ ಸ್ವತಃ ತಯಾರಿಸಿಕೊಳ್ಳುತ್ತದೆ.

ಬಾಟಲಿ ತಯಾರಿಕೆಗೆ ಬೇಕಾದ ಕಚ್ಚಾವಸ್ತು ಕುವೈತ್ ಮತ್ತು ಇರಾನ್‌ನಿಂದ ಬರುತ್ತದೆ. ಆದ್ರೆ ಯುದ್ಧದಿಂದಾಗಿ ಪೂರೈಕೆ ಬಹುತೇಕ ಸ್ಥಗಿತವಾಗಿದೆ. ಕಚ್ಚಾ ವಸ್ತುಗಳನ್ನು ಹೊತ್ತ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ. ಇದರಿಂದ ಬಾಟಲಿ ತಯಾರಿಕೆಯಲ್ಲಿ ಅಡಚಣೆ ಆಗಿದೆ.

ರಾಜ್ಯದಲ್ಲಿ ಬೀಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಿರುವಾಗ ನಂದಿನಿ ಉತ್ಪನ್ನಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇದೆಲ್ಲದರ ನಡುವೆ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕುವೈತ್, ಇರಾನ್‌ನಿಂದ ಪ್ಲಾಸ್ಟಿಕ್ ಕಚ್ಚಾವಸ್ತುಗಳ ಪೂರೈಕೆ ಸ್ಥಗಿತವಾಗಿದೆ. ಹೀಗಾಗಿ ನಂದಿನಿ ನೀರಿನ ಬಾಟಲಿ ಸರಬರಾಜಿನಲ್ಲಿಯೂ ವ್ಯತ್ಯಯವಾಗುತ್ತಿದೆ.

ಇನ್ನು ನೀರಿನ ಬಾಟಲಿಗಳ ಜೊತೆಗೆ ಐಸ್ ಕ್ರೀಂ ಪ್ಯಾಕಿಂಗ್‌ಗೆ ಬೇಕಾದ ಕಚ್ಚಾವಸ್ತುಗಳು ಸಿಗದೇ ಇರುವುದರಿಂದ ಐಸ್ ಕ್ರೀಂ ಸಹ ಸರಿಯಾದ ಪ್ರಮಾಣದಲ್ಲಿ ಬರುತ್ತಿಲ್ಲ, ಕೋಲಾರದಲ್ಲಿ ಹಾಲು ಸಿಗುತ್ತಿದೆ, ಆದ್ರೆ ನಂದಿನಿ ಉತ್ಪನ್ನ ಮಾಡುವ ನೀರು ಸಿಗದಂತಾಗಿದೆ.