ರಾಮನಗರ(Ramnagar): ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಬೆಂಗಳೂರು ಮೈಸೂರು ಸಂಪರ್ಕ ಕಡಿತಗೊಂಡಿದೆ.
ಮೈಸೂರು ರಸ್ತೆಯ ಮಾರ್ಗ ಬದಲಾವಣೆ ಮಾಡಲಾಗಿದ್ದು, ವಾಹನ ಸವಾರರು ಹಾರೋಹಳ್ಳೀ- ಕನಕಪುರ ಮಾರ್ಗದಲ್ಲಿ ಸಂಚಾರ ಮಾಡಬೇಕಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಆಗಿರುವ ಹಿನ್ನೆಲೆ ಮೈಸೂರು ಹೈವೇಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ನಿಂತಿವೆ.
ರಾಮನಗರ ತಾಲೂಕಿನ ಪಾಲಭೋವಿದೊಡ್ಡಿ ಗ್ರಾಮದ ಬಳಿ ಜಮೀನು, ಮನೆಗಳು ಜಲಾವೃತಗೊಂಡಿದ್ದು, ರಾಮನಗರ ಪಟ್ಟಣ, ಅರ್ಕೇಶ್ವರ ಕಾಲೋನಿ ಮುಳುಗಡೆಯಾಗಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದ್ದು, ಮಳೆ ಹಾನಿ ಪ್ರದೇಶಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲದೇ ಸಮಸ್ಯೆಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರ ಮುಖ್ಯ ಕಾರ್ಯರ್ದಶಿ ಮತ್ತು ರಾಮನಗರ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಕುಮಾರಸ್ವಾಮಿ, ನೀರಿನಲ್ಲಿ ಸಿಲುಕಿಕೊಂಡಿರುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತಕ್ಷಣ ಎರಡು ಬೋಟ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಹೆಚ್’ಡಿಕೆ ಟ್ವೀಟ್
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ವಿಪರೀತ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹಸದೃಶ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಇಂದು ಈ ಹೆದ್ದಾರಿಗೆ ಬರದೇ ಇರುವುದು ಒಳಿತು. ಅನಿವಾರ್ಯವಾಗಿ ಸಂಚರಿಸಲೇಬೇಕಾದರೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು-ಬೆಂಗಳೂರು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮಳೆನೀರು ತುಂಬಿದೆ. ಅನೇಕ ಕಡೆ ಹೆದ್ದಾರಿ ಜಲಾವೃತವಾಗಿದೆ. ಅಲ್ಲಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿವೆ. ಹೀಗಾಗಿ ವಾಹನ ಸಂಚಾರ ಮಾಡುವುದು ಅಪಾಯಕಾರಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.