ಬೆಂಗಳೂರು: ಮೇ 8 ರಿಂದ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಲ್ಲಿ ಮೇ 8 ರಿಂದ ಮೇ 10ರವರೆಗೆ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ. ಇನ್ನು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 9ರಿಂದ ಮುಂದಿನ ಎರಡು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.
ವಾಡಿಕೆಗಿಂತ ಹೆಚ್ಚು ತಾಪಮಾನದಿಂದ ಕೆಂಡದಂತಾದ ಕೆಲ ಪ್ರದೇಶಗಳಲ್ಲಿ ಶುಕ್ರವಾರ ವರುಣ ತಂಪೆರೆದಿದ್ದರೂ ರಾಜ್ಯದ ಬಹತೇಕ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಮುಂದುವರಿದಿದೆ. ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸುರಿದರೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಒಣಹವೆ ಮುಂದುವರಿದಿದೆ. ಶುಕ್ರವಾರ ರಾಯಚೂರಲ್ಲಿ 46.4 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರಗಿ 45.8, ಯಾದಗಿರಿ 44.9, ಬಳ್ಳಾರಿ 44.8, ವಿಜಯಪುರ 44.7, ಕೊಪ್ಪಳ 43.9, ಗದಗ 43.4, ಬಾಗಲಕೋಟೆ 43.5, ಬೆಳಗಾವಿ 43.1, ಬೀದರ್ 43, ಮಂಡ್ಯ 43, ರಾಮನಗರ 42.6, ಧಾರವಾಡ 42.2, ಚಿತ್ರದುರ್ಗ 42, ಕೋಲಾರ 42, ಹಾವೇರಿ 41.9, ತುಮಕೂರು 41.8, ದಾವಣಗೆರೆ 41.3, ಚಿಕ್ಕಬಳ್ಳಾಪುರ 41.9, ಬೆಂ.ಗ್ರಾಮಾಂತರ 41.3, ಶಿವಮೊಗ್ಗ 40.1, ಬೆಂಗಳೂರು 40.9 ಉಷ್ಣಾಂಶ ದಾಖಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಉಷ್ಣ ಅಲೆ ಇರಲಿದೆ. ಮಳೆ ಸುರಿದರೂ ಕೆಲ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.