ಬೆಂಗಳೂರು: ತಮಿಳುನಾಡಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಬೆನ್ನಲ್ಲೆ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಂಗಾರು ಮಳೆ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದ್ದು, ಇದೇ ಸಂದರ್ಭದಲ್ಲಿ ಭಾರೀ ಮಳೆ ಬರಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಇಂದು ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಉದ್ಯಾನ ನಗರಿಯಾದ್ಯಂತ ದಟ್ಟಮೋಡಗಳು ಆವರಿಸಿದ್ದು, ಸಂಜೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ನಿನ್ನೆ ರಾತ್ರಿಯೂ ವರುಣನ ಸಿಂಚನವಾಗಿದ್ದು, ನಿನ್ನೆ ಸಂಜೆಯಿಂದ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಬೆಂಗಳೂರು ಮಾತ್ರವಲ್ಲದೇ ಉತ್ತರ ಕನ್ನಡ, ಬಾಗಲಕೋಟೆ, ಉಡುಪಿ, ಗದಗ, ಕೊಪ್ಪಳ, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ವಿಜಯಪುರ, ಬೀದರ್, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಚಿಕ್ಕಬಳ್ಳಾಪುರಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.