ಚಾಮರಾಜನಗರ: ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ನಿರ್ಮಿಸಿರುವ 108 ಅಡಿ ಮಲೆ ಮಹದೇಶ್ವರ ಪ್ರತಿಮೆ ಮುಂಭಾಗ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದಿದೆ.
ಪ್ರತಿಮೆ ಸ್ಥಳದಲ್ಲಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಕ್ತರ ಪ್ರವೇಶ ನಿಷೇಧ ಮಾಡಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೆರಡು ದಿನಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ ಹವಾಮಾನ ಇಲಾಖೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದೆ.
ತಡರಾತ್ರಿ ಸುರಿದ ಅಕಾಲಿಕ ಮಳೆಯಲ್ಲಿ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದ ಸಿದ್ದರಾಜು ಕೆ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದೆ. ಪರಿಣಾಮ ಮನೆಯೊಳಗಿದ್ದ ಸಿದ್ದರಾಜು, ಪತ್ನಿ ಮಹೇಶ್ವರಿ ಹಾಗೂ ಮಕ್ಕಳಾದ ತರುಣ್, ಸಿದ್ದಾರ್ಥ್ಗೆ ಸಣ್ಣಪುಟ್ಟ ಗಾಯಗಳಾಗಿದೆ.
ಪಿ.ಜಿ ಪಾಳ್ಯ ಗ್ರಾ.ಪಂ ವ್ಯಾಪ್ತಿಯ ಮೈಸೂರಪ್ಪನದೊಡ್ಡಿ ಗ್ರಾಮದಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ನಾಲ್ಕು ವಿದ್ಯುತ್ ಕಂಬಗಳು ಮತ್ತು ಮರಗಳು ಬುಡ ಸಮೇತ ರಸ್ತೆಗುರಳಿವೆ.
ಹನೂರು ತಾಲ್ಲೂಕಿನ ಮಲ್ಯಯನಪುರ ಗ್ರಾಮದಲ್ಲಿ ಸಿಡಿಲು ಬಡಿದು ಹಸುವೊಂದು ಮೃತಪಟ್ಟಿದೆ.













