ಬೆಂಗಳೂರು(Bengaluru): ಅತಿವೃಷ್ಟಿಯಿಂದ ರಾಜ್ಯಾದ್ಯಂತ ಆಗಿರುವ ತೊಂದರೆಗಳನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಡಿಕೆಗಿಂತ ಅತಿ ಹೆಚ್ಚು ಮಳೆ ಬಂದಾಗ ಯಾವುದೇ ಪ್ರದೇಶದಲ್ಲೂ ತೊಂದರೆಗಳಾಗುವುದು ಸಾಮಾನ್ಯ, ಇದು ಕೇವಲ ಬೆಂಗಳೂರಿನ ಸಮಸ್ಯೆ ಅಲ್ಲ. ರಾಜ್ಯಾದ್ಯಂತ ಇದೇ ರೀತಿಯಲ್ಲಿ ಸಮಸ್ಯೆಗಳಾಗಿವೆ ಎಂದರು.
ಅರ್ಧ ಗಂಟೆಯಲ್ಲಿಯೇ ರಸ್ತೆಯಲ್ಲಿ ಐದಾರು ಅಡಿ ನೀರು ಹರಿಯುತ್ತದೆ ಎಂದರೆ ಯಾರೂ ಕೂಡ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮಳೆಯಿಂದ ಸಂತ್ರಸ್ತ ರಾದವರಿಗೆ ಸಾವು, ನೋವು ಅನುಭವಿಸಿದವರಿಗೆ ಸರ್ಕಾರ ತಕ್ಷಣವೇ ಸ್ಪಂದಿಸುವ ಕೆಲಸ ಮಾಡುತ್ತಿದೆ. ಎಲ್ಲರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಗಳು ಸ್ಪಂದಿಸುತ್ತಿದ್ದಾರೆ ಎಂದರು.