ಮನೆ ರಾಜ್ಯ ಜಿಲ್ಲೆಗಳಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ – ಬೆಳೆಹಾನಿಗೆ ರೈತರು ಕಂಗಾಲು

ಜಿಲ್ಲೆಗಳಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ – ಬೆಳೆಹಾನಿಗೆ ರೈತರು ಕಂಗಾಲು

0

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಉತ್ತರದ ಹಲವು ಜಿಲ್ಲೆಯ ಜನತೆ ತತ್ತರಿಸಿ ಹೋಗಿದೆ. ನಿನ್ನೆ ಯಾದಗಿರಿಯಲ್ಲಿ ಸುರಿದ ಮಳೆಯು 30 ಕುಟುಂಬದ ಜನರನ್ನು ಬೀದಿಗೆ ತಂದಿದೆ.

ಯಾದಗಿರಿ – ಯಾದಗಿರಿಯಲ್ಲಿ ವರುಣ ಅಬ್ಬರಿಸಿ ಬೊಬ್ಬರಿದಿದ್ದು, ಭಾರಿ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಇದರಿಂದ ಜನರ ಕಂಗಾಲಾಗಿ ಹೋಗಿದ್ದಾರೆ. ತಡರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಯರಗೋಳ ಗ್ರಾಮದ ಸೇತುವೆ, ಹಾಗೂ ಬಾಚವಾರ ಗ್ರಾಮದ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ವಾಹನ ಸಂಚಾರ ಅಡ್ಡಿಯಾಗಿದ್ದು ಜನರು ಪರದಾಡಿದ್ದಾರೆ.

ಯರಗೋಳ ಕೆರೆ ನೀರು ಗ್ರಾಮಕ್ಕೆ ನುಗ್ಗಿದ್ದು ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಇದರಿಂದ ಮನೆಯಲ್ಲಿದ್ದ ಧವಸ ಧಾನ್ಯ ಹಾಗೂ ಇನ್ನಿತರ ವಸ್ತುಗಳು ಹಾನಿಹಾಗಿದ್ದು ಜನರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಇನ್ನು ಬಾಚವಾರ ಗ್ರಾಮದ ಸೇತುವೆ ಮುಳುಗಡೆ ಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಇದರಿಂದ ಗ್ರಾಮದಲ್ಲಿರುವ ಸೇತುವೆಯನ್ನು ಎತ್ತರಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಕಲಬುರಗಿ – ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆಳಂದ ತಾಲ್ಲೂಕಿನ ಪಡಸಾವಳಿಯಲ್ಲಿ ರಸ್ತೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು ಮಣ್ಣೂರ-ಅಫಜಲಪುರ ತೆರಳುವ ರಸ್ತೆ ಸಂಚಾರ ಬಂದ್ ಆಗಿದೆ. ಇದರಿಂದ ಜನರು ಸಂಚಾರ ಮಾಡಲಾಗದೆ ಪರದಾಡಿದರು.

ಬೀದರ್ – ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್, ಔರಾದ್, ಭಾಲ್ಕಿ, ಹುಮ್ನಾಬಾದ್, ಬಸವಕಲ್ಯಾಣದಲ್ಲಿ ಭಾರೀ ಅವಾಂತರ ಸೃಷ್ಟಿ ಆಗಿದೆ. ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡಿದರು.

ಬಳ್ಳಾರಿ – ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಮಳೆಗೆ ನಗರದ ಮೋಕಾ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‌ನಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ಮೊಣಕಾಲುದದ್ದ ನೀರಿನಲ್ಲಿ ಸಂಚಾರ ಮಾಡಲು ವಾಹನ ಸವಾರರು ಹರಸಾಹಸಪಟ್ಟರು.

ದಾವಣಗೆರೆ – ದಾವಣಗೆರೆಯಲ್ಲಿಯೂ ಭಾರೀ ಮಳೆ ಆಗುತ್ತಿರುವ ಹಿನ್ನೆಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಭದ್ರಾ ಬಲದಂಡೆ ನಾಲೆಯ ಅಕ್ವಾಡಕ್ ಹೊಡೆದು ಅಪಾರ ಪ್ರಮಾಣದ ನೀರು ಪೋಲಾಯಿತು. ನಾಲೆ ಹೊಡೆದ ಪರಿಣಾಮ ನಾಲೆಯ ಅಕ್ಕಪಕ್ಕ ಇರುವ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ಹಾನಿ ಆಗಿದೆ. ಇದರಿಂದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಕಳೆದ 20 ವರ್ಷದಿಂದ ನಾಲೆ ರಿಪೇರಿ ಆಗಿಲ್ಲ ಈ ಕಾರಣದಿಂದ ನಾಲೆ ಹೊಡೆದಿದೆ ಎಂದು ಸ್ಥಳೀಯ ರೈತರ ಆಕ್ರೋಶ ವ್ಯಕ್ತಪಡಿಸಿದರು.