ಮಡಿಕೇರಿ(Madikeri): ಕೊಡಗು ಜಿಲ್ಲೆಯಲ್ಲಿ ಸತತ 5 ನೇ ದಿನವಾದ ಬುಧವಾರವೂ ಧಾರಾಕಾರ ಮಳೆ ಸುರಿಯುತ್ತಿದ್ದು, ಒಂದು ದಿನದ ಮಟ್ಟಿಗೆ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
ಮಂಗಳವಾರ ರಾತ್ರಿ ಇಡೀ ಹಲವೆಡೆ ಭಾರಿ ಮಳೆ ಸುರಿದಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು, ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಹಳ್ಳಿಯಲ್ಲಿ 17 ಸೆಂ.ಮೀ, ಮಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16, ಭಾಗಮಂಡಲದಲ್ಲಿ 12 ಮಡಿಕೇರಿ ನಗರದಲ್ಲಿ 9 ಸೆಂ.ಮೀನಷ್ಟು ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.
ಭಾರಿ ವೇಗದಲ್ಲಿ ಬೀಸಿದ ಗಾಳಿಗೆ ಹಲವೆಡೆ ಇಂದೂ ವಿದ್ಯುತ್ ಕಂಬಗಳು ಅಲ್ಲಲ್ಲಿ ಧರೆಗುರುಳಿವೆ. ಮಡಿಕೇರಿ – ಸೋಮವಾರಪೇಟೆ ನಡುವೆ ಹಾಲೇರಿ ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಸಂಚಾರ ಸ್ಥಗಿತಗೊಂಡಿದೆ.
ಅಮ್ಮತ್ತಿ ಸಮೀಪ 33 ಕೆ.ವಿ ಸಾಮರ್ಥ್ಯದ ಸಿದ್ದಾಪುರ ವಿದ್ಯುತ್ ಲೈನ್ ಮೇಲೆ ಮರ ಉರುಳಿದೆ. ಮಡಿಕೇರಿ ನಾಪೋಕ್ಲು ರಸ್ತೆಯಲ್ಲಿಯೂ ವಿದ್ಯುತ್ ಕಂಬಗಳು ಮುರಿದಿವೆ. ಸೆಸ್ಕ್ ಸಿಬ್ಬಂದಿ ಸುರಿಯುತ್ತಿರುವ ಮಳೆಯ ನಡುವೆ ದುರಸ್ತಿ ಕಾರ್ಯ ನಡೆಸಿದ್ದಾರೆ.