ಚಿಕ್ಕಮಗಳೂರು: ಮಲೆನಾಡಿನಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಈಗಾಗಲೇ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊನೆಯದಾಗಿ ನಡೆದ ದುರ್ಘಟನೆಯು ಚಿಕ್ಕಮಗಳೂರಿನ ಎನ್.ಆರ್. ಪುರ ತಾಲೂಕು ಎಲೆಕಲ್ ಘಾಟಿ ಬಳಿ ನಡೆದಿದೆ. ಅಲ್ಲಿ ಭಾರೀ ಗಾಳಿ-ಮಳೆಗೆ ಮರವೊಂದು ಬಿದ್ದು ಅನಿಲ್ ಪಾಯ್ಸ್ (55) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮೃತರು ಬಾಳೆಹೊನ್ನೂರು ಸಮೀಪದ ಬಿಳುಕೊಪ್ಪ ಗ್ರಾಮದ ನಿವಾಸಿಯಾಗಿದ್ದು, ಅವರು ಬೈಕ್‌ನಲ್ಲಿ ಬಾಳೆಹೊನ್ನೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಎಲೆಕಲ್ ಘಾಟಿ ಬಳಿ ಸಾಗುತ್ತಿರುವಾಗ ಬಿರುಸಿನ ಗಾಳಿ ಹಾಗೂ ಮಳೆಗೆ ದೊಡ್ಡ ಮರ ಅವರ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ, ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಅವರನ್ನು ಅಗ್ನಿಶಾಮಕ ವಾಹನದ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲು ಯತ್ನಿಸಿದರೂ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಠಾಣೆಯ ಪಿಎಸ್‌ಐ ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














