ಉತ್ತರಾಖಂಡ: ಇಲ್ಲಿನ ಚಮೋಲಿ ಜಿಲ್ಲೆಯ ಬದರಿನಾಥ್ ಧಾಮ್ನ ಮಾನಾ ಗ್ರಾಮದ ಸಮೀಪ ಇಂದು ಭಾರೀ ಹಿಮಪಾತವಾಗಿ ಕನಿಷ್ಠ 57 ಮಂದಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಕಾರ್ಮಿಕರು ಸಿಲುಕಿಕೊಂಡಿದ್ದಾರೆ.
ಸದ್ಯ 32 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಉಳಿದ 25 ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಆಡಳಿತ, ಪೊಲೀಸರು, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಈ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ, ಹಿಮಪಾತ ಸೇರಿದಂತೆ ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆಯೂ ರಕ್ಷಣಾ ತಂಡಗಳು ಹಿಮಪಾತದಡಿ ಸಿಲುಕಿರುವವರನ್ನು ರಕ್ಷಿಸಲು ಅವಿರತವಾಗಿ ಶ್ರಮಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗರ್ವಾಲ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ರಾಜೀವ್ ಸ್ವರೂಪ್ ಈ ಘಟನೆಯನ್ನು ದೃಢಪಡಿಸಿದ್ದು, “ಮಾನಾ ಗ್ರಾಮದ ಬಳಿ ಹಿಮಪಾತವಾಗಿ ಅನೇಕ ಬಿಆರ್‌ಒ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲು ಮತ್ತು ರಸ್ತೆಯ ಮೇಲಿನ ಹಿಮರಾಶಿಯನ್ನು ತೆರವುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ತಿಳಿಸಿದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿ, ಉಳಿದ ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. “ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ ಬಿಆರ್‌ಒ ನಿರ್ವಹಿಸುತ್ತಿರುವ ನಿರ್ಮಾಣ ಕಾರ್ಯದ ಸಮಯದಲ್ಲಿ ಹಿಮಪಾತದಿಂದಾಗಿ ಹಲವಾರು ಕಾರ್ಮಿಕರು ಸಿಲುಕಿದ್ದಾರೆ ಎಂಬ ದುರಂತ ಸುದ್ದಿ ಬಂದಿದೆ. ಐಟಿಬಿಪಿ, ಬಿಆರ್‌ಒ ಮತ್ತು ಇತರ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಎಲ್ಲಾ ಕಾರ್ಮಿಕ ಸಹೋದರರ ಸುರಕ್ಷತೆಗಾಗಿ ನಾನು ಭಗವಾನ್ ಬದರಿ ವಿಶಾಲ್ ಅವರನ್ನು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.














