ಮೈಸೂರು(Mysuru): ಬಾದಾಮಿ ಕ್ಷೇತ್ರದ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅಲ್ಲಿನ ಜನರು ಹೆಲಿಕಾಪ್ಟರ್ ಕೊಡುಗೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಲ್ಲಿ 60 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಐದು ವರ್ಷದಲ್ಲಿ ನಡೆದಿದೆ. ಆದ್ದರಿಂದ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಅಲ್ಲಿನ ಜನರು ಹೇಳುತ್ತಿದ್ದಾರೆ. ಶಾಸಕರು 15 ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಬರಬೇಕು. ಆದರೆ, ವಯಸ್ಸಿನ ಕಾರಣಕ್ಕೆ ಬರಲಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ, ಜನರೇ ಹೆಲಿಕಾಪ್ಟರ್ ಕೊಡಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದರು.
ನನ್ನ ಬೆಂಬಲಿಗರು, ಆಪ್ತರಾದ 24 ಮಂದಿಗೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಹೈಕಮಾಂಡ್’ಗೆ ಮನವಿ ಮಾಡಿದ್ದೇನೆ. ಪಕ್ಷದಲ್ಲಿ ನಾನೂ ಪ್ರಬಲ ನಾಯಕ. ಆದರೆ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು.
ನಾನು ಸದ್ಯ ಚಾಮರಾಜಪೇಟೆ ಶಾಸಕ. ಹೈಕಮಾಂಡ್ ಹೇಳಿದರೆ ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು ಎಂದು ಶಾಸಕ ತನ್ವೀರ್ ಸೇಠ್’ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಸ್ಲಿಮರ ಮೇಲೆ ಪ್ರೀತಿ ಇದ್ದರೆ ಸಿ.ಎಂ.ಇಬ್ರಾಹಿಂ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲೆಸೆದ ಜಮೀರ್, ಜೆಡಿಎಸ್ 18ರಿಂದ 23 ಸೀಟು ಗೆಲ್ಲಬಹುದು ಎಂದರು.