ಯಾವುದೇ ಒಂದು ಸ್ಥಳ ಪುಣ್ಯಕ್ಷೇತ್ರ ಎನಿಸಿಕೊಳ್ಳಲು ಆ ಸ್ಥಳದಲ್ಲಿ ಜೀವಂತ ನದಿ ಅಥವಾ ಸಮುದ್ರ ಹಾಗೂ ಅಲ್ಲಿ ಮಹಾಪುರುಷರಿಂದಲಾಗಲೀ, ಋಷಿಮುನಿಗಳಿಂದಾಗಲೀ ಪ್ರತಿಷ್ಠಾಪಿಸಲಾದ ಇಲ್ಲವೇ ದೇವರೇ ಸ್ವಯಂ ಉದ್ಭವಿಸಿದ ಭಗವಂತನಿರಬೇಕು ಎಂದು ಹಿರಿಯರು ಹೇಳುತ್ತಾರೆ.
ಇಂಥ ಎಲ್ಲ ಲಕ್ಷಣಗಳೂ ಇರುವ ಪುಣ್ಯಕ್ಷೇತ್ರ ಮೈಸೂರು ಜಿಲ್ಲೆಯ ನಂಜನಗೂಡು ಸಮೀಪದ ಹೆಮ್ಮರಗಾಲ.
ಹೆಮ್ಮರಗಾಲದ ಪೂರ್ವ ಹೆಸರು ಹೇಮಪುರಿ. ಕೌಂಡಿನ್ಯ ನದಿ ತೀರದ ಹೆಮ್ಮರಗಾಲದಲ್ಲಿ ಭಗವಂತನಾದ ಶ್ರೀಕೃಷ್ಣನು ಆರ್ಚಾಮೂರ್ತಿಯಾಗಿ ವೇಣುನಾದ ಮಾಡುತ್ತಾ, ಬಾಲ ಗೋಪಾಲನಾಗಿ, ಪ್ರಸನ್ನವದನನಾಗಿ ಭಕ್ತವೃಂದಕ್ಕೆ ದರ್ಶನ ನೀಡುತ್ತಾ ತ್ರಿಭಂಗಿಯಲ್ಲಿ ಭಕ್ತರನ್ನು ಹರಸುತ್ತಿದ್ದಾನೆ.
ಈ ಕ್ಷೇತ್ರದಲ್ಲಿರುವ ವೇಣುಗೋಪಾಲನನ್ನು ಕೌಂಡಿನ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದು ಸ್ಥಳಪುರಾಣ ಸಾರುತ್ತದೆ. ಹೀಗಾಗೇ ಈ ಕ್ಷೇತ್ರಕ್ಕೆ ಕೌಂಡಿನ್ಯ ಕ್ಷೇತ್ರವೆಂಬ ಹೆಸರೂ ಇದೆ.
ಸುಂದರವಾದ ಹಾಗೂ ಪುರಾತನವಾದ ಭವ್ಯ ದೇವಾಲಯದ ಗರ್ಭಗೃಹದಲ್ಲಿರುವ ವೇಣುಗೋಪಾಲಸ್ವಾಮಿಯ ಪ್ರಭಾವಳಿಯ ಎರಡೂ ಕಡೆ ಗೋಪಾಲಕ, ಗೋವುಗಳಿವೆ. ಶಿರೋಭಾಗದಲ್ಲಿ ಸಿಂಹಲಲಾಟಕ್ಕೆ ಹೊಂದಿಕೊಂಡಂತೆ ಆದಿಶೇಷನ ಕೆತ್ತನೆ ಇದೆ.
ಗೋವರ್ಧನ ಕ್ಷೇತ್ರವೆಂದೂ ಹೆಸರಾದ ಈ ದೇವಾಲಯದಲ್ಲಿರುವ ವೇಣುಗೋಪಾಲನ ಮಹಿಮೆ ಅಪಾರವಾದುದು. ಹಿಂದೆ ಚೋಳ ಮಹಾರಾಜನ ಪಟ್ಟಮಹಿಷಿಗೆ ಹುಟ್ಟಿದ ಮಕ್ಕಳೆಲ್ಲಾ ಹೆಣ್ಣೇ ಆಗಿರುತ್ತವೆ. ನಪುತ್ರಸ್ಯ ಗತಿರ್ನಾಸ್ತಿ, ರಾಜ್ಯಕ್ಕೆ ವಾರಸುದಾರನಿಲ್ಲದಂತಾಗುತ್ತದೆ ಎಂದು ರಾಜ ರಾಣಿ ಕ್ಷೇತ್ರದ ಮಹಿಮೆ ಅರಿತು ಇಲ್ಲಿಗೆ ಬಂದು ದೇವರಿಗೆ ತಮಗೆ ಗಂಡು ಮಗನನ್ನು ಕರುಣಿಸುವಂತೆ ಕೋರುತ್ತಾರೆ.
ಪಟ್ಟಮಹಿಷಿ ಗರ್ಭವತಿಯಾಗುತ್ತಾಳೆ, ಅರಮನೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ ಆದರೆ ಆಗ ಹುಟ್ಟಿದ ಮಗುವೂ ಹೆಣ್ಣೆ ಆಗಿರುತ್ತದೆ. ರಾಜನ ತಾಯಿ ಸೊಸೆಯನ್ನು ಮೂದಲಿಸುತ್ತಾಳೆ. ಮನನೊಂದ ರಾಣಿ ವೇಣುಗೊಪಾಲದ ಪಾದದಡಿ ಕುಳಿತು ಕಣ್ಣೀರುಗರೆದು ತಾನು ಪುತ್ರ ಭಿಕ್ಷೆ ನೀಡುವಂತೆ ಕೋರಿದರೂ, ಹೆಣ್ಣು ಮಗುವನ್ನೇ ಕರುಣಿಸಿದೆ. ಬೆಳಗಾಗುವುದರೊಳಗೆ ನನ್ನ ಹೆಣ್ಣು ಮಗು ಗಂಡಾಗದಿದ್ದರೆ ಪ್ರಾಣತ್ಯಾಗ ಮಾಡುತ್ತೇನೆ ಎಂದು ಹೇಳಿ ಮಹಾದ್ವಾರದ ಬಳಿ ದೈವಾನುಗ್ರಹಕ್ಕಾಗಿ ಕಾಯುತ್ತಾಳೆ.
ರಾಣಿಯ ಭಕ್ತಿಗೆ ಮೆಚ್ಚಿದ ವೇಣುಗೋಪಾಲ ಹೆಣ್ಣು ಶಿಶುವನ್ನು ಗಂಡಾಗಿ ಪರಿವರ್ತಿಸುತ್ತಾನೆ. ಆಗ ರಾಣಿ ಏನಪ್ಪ ಗೋಪಾಲ ನನಗೆ ಗಂಡು ಮಗು ಕರುಣಿಸಲು ಇಷ್ಟು ಕಾಡಿದೆಯಾ ನೀನು ನಿಜಕ್ಕೂ ಹುಚ್ಚನಪ್ಪ ಎಂದು ಆನಂದ ತುಂದಿಲಳಾಗಿ ಹೇಳುತ್ತಾಳೆ. ಅಂದಿನಿಂದ ಈ ಸ್ವಾಮಿಗೆ ಹುಚ್ಚು ಗೋಪಾಲ ಎಂಬ ಹೆಸರೂ ಬಂದಿದೆ.
ದೇವರ ಪವಾಡ ಕಂಡು ಬೆರಗಾದ ಮಹಾರಾಜ ದೇವಾಲಯಕ್ಕೆ ಕಲ್ಯಾಣ ಹಾಸುಗಲ್ಲು ಹಾಕಿಸಿದ್ದಾನೆಂದು ಪುರೋಹಿತರು ಹೇಳುತ್ತಾರೆ. ಮೈಸೂರು ಒಡೆಯರಾದ ಕಂಠೀರವ ನರಸಿಂಹರಾಜ ಒಡೆಯರು ಕೂಡ ತಮಗೆ ಗಂಡು ಮಕ್ಕಳಿಲ್ಲವೆಂದು ಸ್ವಾಮಿಯ ದರ್ಶನ ಪಡೆದು, ಪೂಜಿಸಿ ವರ ಬೇಡುತ್ತಾರೆ. ಪ್ರಸನ್ನನಾದ ಸ್ವಾಮಿಯ ಅನುಗ್ರಹದಿಂದ ಗಂಡು ಸಂತಾನವಾಗುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರು ವೇಣುಗೋಪಾಲನ ವರ ಪ್ರಸಾದದಿಂದ ಹುಟ್ಟಿದವರೆಂದು ಇತಿಹಾಸ ಹೇಳುತ್ತದೆ. ಮೈಸೂರು ಒಡೆಯರು ಕೂಡ ಈ ದೇವಾಲಯವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ.
ಅಂದಿನಿಂದಲೂ ಹೆಮ್ಮರಗಾಲದ ವೇಣುಗೋಪಾಲ ಸಂತಾನ ಗೋಪಾಲಸ್ವಾಮಿ ಎಂದೇ ಹೆಸರಾಗಿದ್ದಾನೆ. ಇಂದಿಗೂ ಮದುವೆಯಾಗಿ ಬಹುಕಾಲ ಮಕ್ಕಳಿಲ್ಲದವರು ಇಲ್ಲಿಗೆ ಬಂದು ದೇವರಿಗೆ ಹರಕೆ ಹೊರುತ್ತಾರೆ. ಸಂತಾನ ಭಾಗ್ಯವಾದ ಬಳಿಕ ಇಲ್ಲಿ ಬಂದು ದೇವಾಲಯದಲ್ಲಿ ತೊಟ್ಟಿಲು ಕಟ್ಟಿ ಹರಕೆ ತೀರಿಸುತ್ತಾರೆ.
ಸುಂದರ ಮಂದಸ್ಮಿತ ವೇಣುಗೋಪಾಲನ ಪೂಜಿಸಿದರೆ ಸಕಲ ಸಂಕಷ್ಟ ಪರಿಹಾರವಾಗುತ್ತದೆ ಎಂಬುದು ಪ್ರತೀತಿ. ರಮಣೀಯ ಪರಿಸರದಲ್ಲಿರುವ ಈ ದೇವಾಲಯಕ್ಕೆ ಆಗಮಿಸಲು ನಂಜನಗೂಡಿನಿಂದ ಬಸ್ ಸೌಲಭ್ಯವಿದೆ.