ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದು. ಹೀಗಾಗಿ ಕಿಡ್ನಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ.
ಕಿಡ್ನಿ ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಹೊರಹಾಕಲು, ರಕ್ತದಲ್ಲಿ ಸೋಡಿಯಂ, ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ನೀರು, ಲವಣಗಳು ಮತ್ತು ಖನಿಜಗಳ ಆರೋಗ್ಯಕರ ಸಮತೋಲನವನ್ನು ನಿರ್ವಹಿಸಲು ಮುಖ್ಯವಾಗಿರುತ್ತದೆ.
ಕಿಡ್ನಿಯನ್ನು ಹೇಗೆ ಆರೋಗ್ಯವಾಗಿಟ್ಟುಕೊಳ್ಳುವುದು? ಆಹಾರ ಕ್ರಮ, ವ್ಯಾಯಾಮಾದ ಮೂಲಕ ಹೇಗೆ ಕಿಡ್ನಿಯನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಿಡ್ನಿ ಸಮಸ್ಯೆ ಇದ್ದವರು ಆಹಾರ ಸೇವನೆ ಬಗ್ಗೆ ಹೆಚ್ಚು ನಿಗಾ ಇಟ್ಟುಕೊಳ್ಳಬೇಕು. ಉದಾಹರಣೆಗೆ ಕಿಡ್ನಿಸ್ಟೋನ್ ಇದ್ದರೆ ಅಂತಹವರು ಟೊಮೆಟೋ, ಬೀಜವಿರುವ ಬದನೆಕಾಯಿ, ಹಸಿಮೆಣಸು, ಕ್ಯಾಬೀಜ್‌ನಂತಹ ಆಹಾರಗಳನ್ನು ಸೇವನೆ ಮಾಡಲೇಬಾರದು. ಅದಷ್ಟು ಮಜ್ಜಿಗೆ, ಬಾರ್ಲಿ ನೀರು, ರಾಗಿಯಂತಹ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು. ವ್ಯಾಯಾಮಕ್ಕೆ ಪೂರಕವಾಗಿ ಆಹಾರಗಳನ್ನು ಸೇವನೆ ಮಾಡುವುದರಿಂದ ಕಿಡ್ನಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದಾಗಿದೆ.
ಯೋಗ/ ವ್ಯಾಯಾಮಾ
ಆಸನಗಳು ದೇಹವನ್ನು ಬಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಉಸಿರಾಟದ ವ್ಯಾಯಾಮಗಳನ್ನು ಪ್ರತಿದಿನವೂ ಮಾಡಬಹುದು. ಧ್ಯಾನ ಮತ್ತು ಯೋಗವು ಮನಸ್ಸನ್ನು ಒತ್ತಡದಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಸಿಟ್-ಅಪ್‌ಗಳು, ಸ್ಕ್ವಾಟ್‌ಗಳು, ಕ್ಯಾಫ್ ರೈಸ್, ಡಿಪ್ಸ್, ಪುಲ್-ಅಪ್‌ಗಳಂತಹ ವ್ಯಾಯಾಮಗಳನ್ನು ಮಾಡುವುದರಿಂದ ಕಿಡ್ನಿಯನ್ನು ಆರೋಗ್ಯಯುತವಾಗಿಟ್ಟುಕೊಳ್ಳಬಹುದು.
ಡಯಾಲಿಸಿಸ್‌ಗೆ ಒಳಗಾದವರು ಕೂಡ ಈ ರೀತಿಯ ವ್ಯಾಯಾಮಗಳನ್ನು ಮಾಡಬಹುದಾಗಿದೆ. ಆದರೆ ಆದಷ್ಟು ಎಚ್ಚರಿಕೆ ಇರಲಿ. ಸುಸ್ತು ಕಾಣಿಸಿಕೊಂಡ ತಕ್ಷಣ ಅಂತಹ ಅಭ್ಯಾಸಗಳನ್ನು ನಿಲ್ಲಿಸಿ.
ನಡಿಗೆ
ದೇಹದ ಎಲ್ಲಾ ಭಾಗಗಳ ಆರೋಗ್ಯಕ್ಕೆ ನಡಿಗೆ ಒಳ್ಳೆಯದು. ಅದೇ ರೀತಿ ಕಿಡ್ನಿ ಸಮಸ್ಯೆ ಇರುವವರೂ ಕೂಡ ಪ್ರತಿದಿನ ಕೆಲಹೊತ್ತು ಸಾಧ್ಯವಾದರೆ ವೇಗದ ನಡಿಗೆ ಅಥವಾ ನಿಧಾನವಾಗಿ ಉಸಿರಿನೆಡೆಗೆ ಗಮನಹರಿಸಿ ವಾಕಿಂಗ್ ಮಾಡುವುದು ಒಳ್ಳೆಯದು.
ಅತ್ಯಂತ ಸುರಕ್ಷಿತವಾದ ವ್ಯಾಯಾಮಗಳಲ್ಲಿ ನಡಿಗೆ ಪ್ರಮುಖವಾದದ್ದಾಗಿದೆ. ಸೊಂಟ, ಕಾಲುಗಳಿಗೆ ಉತ್ತಮ ವ್ಯಾಯಾಮ ದೊರಕಿ ಕಿಡ್ನಿಯನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ.
ಸ್ವಿಮ್ಮಿಂಗ್
ಇಡೀ ದೇಹವನ್ನು ಚಟುವಟಿಕೆಯಿಂದ ಇಡುವಂತೆ ಮಾಡುವುದು ಈಜು. ಇದು ಕಿಡ್ನಿಯ ಆರೋಗ್ಯಕ್ಕೂ ಒಳ್ಳೆಯದು. ತಣ್ಣನೆಯ ನೀರಿನಲ್ಲಿ ಈಜುವುದರಿಂದ ಮಾನಸಿಕವಾಗಿಯೂ ಖುಷಿಯಾಗಿರಬಹುದು, ಎಲ್ಲಾ ಭಾಗಗಳನ್ನೂ ಕೂಡ ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳಬಹುದು.
ಇದು ಎಲ್ಲರಿಗೂ ವ್ಯಾಯಾಮದ ಅತ್ಯುತ್ತಮ ರೂಪವಾಗಿದೆ. ಕೀಲುಗಳ ಮೇಲಿನ ಒತ್ತಡವು ನೀರಿನಲ್ಲಿ ಕಡಿಮೆಯಾಗಿರುವುದರಿಂದ, ವಾಕಿಂಗ್ ಮಾಡುವಾಗ ಸಾಧ್ಯವಾಗುವ ಹೆಚ್ಚುವರಿ ಒತ್ತಡಕ್ಕೆ ಕೀಲುಗಳನ್ನು ಒಡ್ಡದೆ ವ್ಯಾಯಾಮ ಮಾಡಲು ಅತ್ಯುತ್ತಮ ಮಾರ್ಗವಾಗಿದೆ.
ಫ್ರೀಸ್ಟೈಲ್ ಡ್ಯಾನ್ಸ್
ಡ್ಯಾನ್ಸ್ ಅಭ್ಯಾಸ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಡೀ ದೇಹಕ್ಕೆ ಚಲನೆಯನ್ನು ನೀಡಿ, ಅಂಗಗಳನ್ನು ಸಡಿಲಗೊಳಿಸಿ ಫಿಟ್ ಆಗಿರುವಂತೆ ಮಾಡುತ್ತದೆ. ಫ್ರೀ ಸ್ಟೈಲ್ ಡ್ಯಾನ್ಸ್ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾಗಿದೆ.
ಪ್ರತಿ ದಿನ ಸಂಜೆ ಅಥವಾ ಬೆಳಿಗ್ಗೆ ಅರ್ಧಗಂಟೆ ಫ್ರೀಸ್ಟೈಲ್ ಡ್ಯಾನ್ಸ್ ಮಾಡುವುದರಿಂದ ಹೆಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ. ಕಿಡ್ನಿಗಳಿಗೂ ಉತ್ತಮ ವ್ಯಾಯಾಮ ದೊರಕಿದಂತಾಗಿ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ.