ಕುಟುಂಬದ ಜೊತೆ ಗಣರಾಜ್ಯೋತ್ಸವದ ರಜೆಗೆ ಯಾವೆಲ್ಲಾ ಪ್ರಶಾಂತವಾದ ತಾಣಕ್ಕೆ ಹೋಗಿ ಪ್ರವಾಸ ಮಾಡಬಹುದು ಗೊತ್ತಾ? ಈ ಪ್ರವಾಸ ನಿಜಕ್ಕೂ ರೋಮಾಂಚಕಾರಿ ಹಾಗು ನೆಮ್ಮದಿಯನ್ನು ನೀಡುತ್ತದೆ.
ಮುಖ್ಯವಾಗಿ ಜನವರಿ ತಿಂಗಳು ಆಹ್ಲಾದಕರವಾದ ವಾತಾವರಣ ಹೊಂದಿರುತ್ತದೆ. ಈ ಸಮಯದಲ್ಲಿ ಕಣಿವೆಗಳು, ಗಿರಿಧಾಮಗಳಿಗೆ ಹೋಗುವುದು ನಿಮಗೆ ಉಲ್ಲಾಸಕರವಾಗಿಸಬಹುದು. ದಕ್ಷಿಣ ಭಾರತದ ಕೆಲವು ಅದ್ಭುತವಾದ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.
ಅರಕು ವ್ಯಾಲಿ
ಪಶ್ಚಿಮಘಟ್ಟಗಳ ಸೊಗಸಾದ ದೃಶ್ಯಾವಳಿಗಳನ್ನು ನೀವು ಕಣ್ತುಂಬಿಕೊಳ್ಳಲು ಅರಕು ಕಣಿವೆ ಬೆಸ್ಟ್ ಎಂದೇ ಹೇಳಬಹುದು. ಇದು ವಿಶಾಖಪಟ್ಟಣಂನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಅದ್ಭುತವಾದ ಗಿರಿಧಾಮವಾಗಿದೆ. ಅರಕು ಕಣಿವೆಗೆ ರೈಲಿನಲ್ಲಿ ನೀವು ಪ್ರಯಾಣಿಸುತ್ತಿದ್ದರೆ ಮಾರ್ಗದಲ್ಲಿ 58 ಸುರಂಗಗಳು, 84 ಸೇತುವೆಗಳ ಮೇಲೆ ಹಾಗು ಹೋಗುತ್ತಿರಿ. ಅರಕು ಕಣಿವೆಯ ಸಮೀಪದಲ್ಲಿ ಬೋರಾ ಗುಹೆಗಳು, ಕಟಿಕಿ ಜಲಪಾತ, ಭೀಮಿಲಿ ಬೀಚ್, ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಕಣ್ತುಂಬಿಕೊಳ್ಳಿ.
ಸ್ಕಂದಗಿರಿ
ಚಾರಣಪ್ರಿಯರ ಸ್ವರ್ಗವಾಗಿರುವ ಸ್ಕಂದಗಿರಿಗೆ ರಾತ್ರಿಯ ಹೊತ್ತಿನಲ್ಲಿ ಟ್ರೆಕ್ಕಿಂಗ್ ಮಾಡುವುದು ರೋಮಾಂಚಕ ಅನುಭೂತಿಯನ್ನು ಉಂಟು ಮಾಡುತ್ತದೆ. ಸ್ಕಂದಗಿರಿ ಐತಿಹಾಸಿಕವಾಗಿ ಕಲವರ ಬೆಟ್ಟ ಎಂದು ಸಹ ಕರೆಯಲಾಗುತ್ತದೆ. ಜನವರಿ 26 ರ ರಜೆಗೆ ಸ್ನೇಹಿತೊಟ್ಟಿಗೆ ಒಮ್ಮೆ ಸ್ಕಂದಗಿರಿಗೆ ಭೇಟಿ ನೀಡಿ. ಇದು ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರದಲ್ಲಿದೆ.
ಹೊಗೇನಕಲ್ ಜಲಪಾತ
ಕರ್ನಾಟಕ ಹಾಗು ತಮಿಳುನಾಡಿನ ಗಡಿಯಲ್ಲಿರುವ ಈ ಜಲಪಾತವು ಎರಡು ರಾಜ್ಯಗಳ ಪ್ರವಾಸಿಗರ ಹೃದಯವನ್ನು ಸ್ಪರ್ಶಿಸಿದೆ. ಜಲಪಾತ ಪ್ರೇಮಿಗಳಿಗಂತು ಇದೊಂದು ಸ್ವರ್ಗ ಎಂದೇ ಹೇಳಬಹುದು. ತನ್ನ ಸ್ಪಟಿಕ ಸ್ಪಷ್ಟವಾದ ನೀರಿನಿಂದ ಬಂಡೆಗಳಿಗೆ ರಭಸವಾಗಿ ಅಪ್ಪಳಿಸುವ ಮೂಲಕ ಹೊಗೆಯನ್ನು ಸೃಷ್ಟಿಸುವ ಕಾರಣದಿಂದ ಈ ಜಲಪಾತಕ್ಕೆ ಹೊಗೇನಕಲ್ ಜಲಪಾತ ಎಂಬ ಹೆಸರು ಬಂದಿತು. ಮಳೆಗಾಲದಲ್ಲಿ ಈ ಜಲಪಾತದ ಸೌಂದರ್ಯ ವರ್ಣಿಸಲು ಪದಗಳೇ ಸಾಲವು. ಕೊರಾಕಲ್ ಸವಾರಿ, ಸಮುದ್ರಾಹಾರ, ಸ್ಥಳೀಯ ತೈಲ ಮಸಾಜ್ನಂತಹ ಆರ್ಕಷಣೆಗಳು ನಿಮಗೆ ಸೆಳೆಯಬಹುದು.
ಧನುಷ್ಕೋಡಿ
ಧನುಷ್ಕೋಡಿ ಅಥವಾ ಧನುಷ್ಕೋಟಿ ಪಟ್ಟಣವು ರಾಮೇಶ್ವರಂನಿಂದ ಕೇವಲ 18 ಕಿ.ಮೀ ದೂರದಲ್ಲಿದೆ. 1964 ರಲ್ಲಿ ಭಾರತ ಕಂಡರಿಯದ ಭೀಕರ ಚಂಡಮಾರುತಕ್ಕೆ ತುತ್ತಾಯಿತು. ಈ ಪ್ರಶಾಂತವಾದ ತಾಣಕ್ಕೆ ಕುಟುಂಬ ಸಮೇತ ಪ್ರವಾಸ ಮಾಡಲು ಜನರು ಬಯಸುತ್ತಾರೆ. ಇದನ್ನು ಆಡಮ್ಸ್ ಸೇತುವೆ ಎಂದು ಸಹ ಕರೆಯಲಾಗುತ್ತದೆ. ಇಲ್ಲಿ ಕೋದಂಡರಾಮಸ್ವಾಮಿ ದೇವಾಲಯಕ್ಕೆ ತಪ್ಪದೇ ಭೇಟಿ ನೀಡಿ. ಇಲ್ಲಿ ಸೀತಾ, ರಾಮ, ಲಕ್ಷ್ಮಣ, ವಿಭೀಷಣ ಮತ್ತು ಹನುಮಂತನ ಮೂರ್ತಿಗಳಿರುವುದನ್ನು ನೋಡಬಹುದು.
ಗಂಡಿಕೋಟೆ
ಆಂಧ್ರಪ್ರದೇಶದ ಗಂಡಿಕೋಟೆ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ತಾಣ. ಇದು ಕಡಪಾ ಜಿಲ್ಲೆಯ ಜಮ್ಮಲಮಡುಗುವಿನಿಂದ 15 ಕಿ.ಮೀ ದೂರದಲ್ಲಿದೆ. ಈ ಭದ್ರವಾದ ಗಂಡಿಕೋಟೆಯು ಕಲ್ಯಾಣಿ ಚಾಲುಕ್ಯರು, ಪೆಮ್ಮಸಾನಿ ನಾಯಕರು ಮತ್ತು ಗೋಲ್ಕೊಂಡ ಸುಲ್ತಾನರು ಸೇರಿದಂತೆ ಅನೇಕ ರಾಜವಂಶಿಕರಿಗೆ ಇದು ಅಧಿಕಾರದ ಕೇಂದ್ರವಾಗಿತ್ತು. ಪೆನ್ನಾ ನದಿಯ ಆಹ್ಲಾದಕರವಾದ ವಾತಾವರಣವನ್ನು ಮತ್ತು ಕೋಟೆಯ ಐತಿಹಾಸಿಕ ವಿವರವನ್ನು ನೀವು ಇಲ್ಲಿ ಆನಂದಿಸಬಹುದು.