ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಮೈಸೂರಿನಲ್ಲಿ ನಾಡಹಬ್ಬ ದಸರಾಗಾಗಿ ಸಿದ್ಧತೆಗಳು ಜೋರಾಗಿ ಸಾಗಿವೆ. ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ ಆನೆಗಳು ಅರಮನೆ ಪ್ರವೇಶ ಮಾಡಿ ಈಗಾಗಲೇ ಅವುಗಳಿಗೆ ತರಬೇತಿ ಸಹ ನೀಡಲಾಗುತ್ತಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಪ್ರತಿನಿತ್ಯ ಎರಡು ಬಾರಿ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ.
ಆನೆಗಳ ತೂಕ ಹೆಚ್ಚಿಸಲು ಮತ್ತು ಅವುಗಳ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ವಿವಿಧ ಬಗೆಯ ಧಾನ್ಯಗಳನ್ನು ಬೇಯಿಸಿ ಅದಕ್ಕೆ ತರಕಾರಿಗಳನ್ನು ಮಿಶ್ರಣ ಮಾಡಿ ಪ್ರತಿನಿತ್ಯ 2 ಬಾರಿ ವಿಶೇಷ ಆಹಾರ ನೀಡಲಾಗುತ್ತಿದೆ.
ಪ್ರತಿ ನಿತ್ಯ ಒಂದು ಗಂಡು ಆನೆಗೆ 650 ರಿಂದ 750 ಕೆಜಿ ಆಹಾರ ಕೊಡಲಾಗುತ್ತಿದೆ. ಹೆಣ್ಣು ಆನೆಗೆ 450 ರಿಂದ 500 ಕೆಜಿ ಆಹಾರ ನೀಡಲಾಗುತ್ತಿದೆ. ಒಂದು ಆನೆಗೆ ಪ್ರತಿನಿತ್ಯ 6 ರಿಂದ 7 ಕೆಜಿ ಪ್ರೋಟಿನ್ ಯುಕ್ತ ಆಹಾರ ನೀಡಲಾಗುತ್ತಿದೆ.
ಭತ್ತ, ಗೋಧಿ, ಬೇಳೆ, ಬೆಲ್ಲ, ತರಕಾರಿ, ಬೆಣ್ಣೆ ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ. ಅದರಲ್ಲೂ ಆನೆಗಳಿಗೆ ಬೇಯಸಿದ ವಿಶೇಷ ಆಹಾರ ನೀಡಿ ಅವುಗಳ ಮೇಲೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಲ್ಲಾ 9 ಆನೆಗಳ ತೂಕ ಪರೀಕ್ಷೆ ಪ್ರಕ್ರಿಯೆ ಈಗಾಗಲೇ ನಡೆದಿದ್ದು, ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ಬರೋಬ್ಬರಿ 5,560 ಕೆಜಿ ತೂಕ ಹೊಂದಿದ್ದಾನೆ. 2ನೇ ಸ್ಥಾನದಲ್ಲಿ ಧನಂಜಯ್ ಆನೆ ಕಾಣಿಸಿಕೊಂಡಿದೆ. ಲಕ್ಷ್ಮಿ ಆನೆ ತೂಕ ಪರೀಕ್ಷೆಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಗಜಪಡೆಗಳ ತೂಕ :
ಅಭಿಮನ್ಯು : 5560 ಕೆಜಿ ತೂಕ
ಧನಂಜಯ : 5155 ಕೆಜಿ ತೂಕ
ಗೋಪಿ : 4970 ಕೆಜಿ ತೂಕ
ಭೀಮ : 4945 ಕೆಜಿ ತೂಕ
ಏಕಲವ್ಯ : 4730 ಕೆಜಿ ತೂಕ
ಕಂಜನ್ : 4515 ಕೆಜಿ ತೂಕ
ರೋಹಿತ್ : 3625 ಕೆಜಿ ತೂಕ
ವರಲಕ್ಷ್ಮಿ : 3495 ಕೆಜಿ ತೂಕ
ಲಕ್ಷ್ಮಿ : 2480 ಕೆಜಿ ತೂಕ