ಒಂದೆಡೆ ಚುನಾವಣೆಯ ರಂಗು ಜೋರಾಗಿದೆ. ಮತ್ತೊಂದೆಡೆ ಐಪಿಎಲ್ ಪಂದ್ಯಗಳ ಸಂಭ್ರಮ ಮನೆ ಮಾಡಿದೆ. ಈ ನಡುವೆ ಚಿತ್ರರಂಗದವರು ಸುಮ್ಮನೆ ಕೂತಿಲ್ಲ. ಪ್ರತಿ ವಾರದಂತೆ ಈ ವಾರ ಕೂಡ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡುವ ಪದ್ಧತಿ ಮುಂದುವರಿದಿದೆ.
ಏಪ್ರಿಲ್ 14ರಂದು ಯಾವೆಲ್ಲ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ರಮೇಶ್ ಅರವಿಂದ್ ಅವರು ‘ಶಿವಾಜಿ ಸುರತ್ಕಲ್ 2’ ಚಿತ್ರದ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ.
ಹಾಸ್ಯ ನಟ ಕೋಮಲ್ ಅವರು ‘ಉಂಡೇನಾಮ’ ಮೂಲಕ ನಗುವಿನ ಕಚಗುಳಿ ಇಡಲಿದ್ದಾರೆ.
ಅಷ್ಟೇ ಅಲ್ಲದೇ, ಇನ್ನೂ ಕೆಲವು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಟಾಲಿವುಡ್ ನಲ್ಲಿ ‘ಶಾಕುಂತಲಂ’ ಸಿನಿಮಾ ತೆರೆಗೆ ಬರುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಪೌರಾಣಿಕ.. ಹೀಗೆ ಹಲವು ಪ್ರಕಾರದ ಸಿನಿಮಾಗಳು ಈ ವಾರ ಚಿತ್ರಮಂದಿರದಲ್ಲಿ ಸದ್ದು ಮಾಡಲಿವೆ.
‘ಶಿವಾಜಿ ಸುರತ್ಕಲ್ 2’:
ರಮೇಶ್ ಅರವಿಂದ್ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಶಿವಾಜಿ ಸುರತ್ಕಲ್ 2’ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದದವರು ನಟಿಸಿದ್ದಾರೆ. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.














