ಬೆಂಗಳೂರು: ನಗರದ ಜನಪ್ರಿಯ ಕೆಫೆಯೊಂದರ ಶೌಚಾಲಯದಲ್ಲಿ ಹಿಡೆನ್ ಕ್ಯಾಮೆರಾ ಪತ್ತೆಯಾಗಿದ್ದು, ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟಿದ್ದ ಆರೋಪಿಯ ಬಂಧನವಾಗಿದೆ.
ಬಂಧಿತ ಆರೋಪಿಯನ್ನು ಭದ್ರಾವತಿಯ ಮನೋಜ್ ಎಂದು ಗುರ್ತಿಸಲಾಗಿದೆ. ಈತ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದ.
ಯುವತಿಯೊಬ್ಬಳು ಥರ್ಡ್ ವೇವ್ ಕಾಫಿ ಔಟ್‌ಲೆಟ್‌ಗೆ ಹೋಗಿದ್ದು, ಕಾಫಿ ಆರ್ಡರ್ ಮಾಡಿದ್ದಾಳೆ. ಬಳಿಕ ಅಲ್ಲಿನ ವಾಶ್ ರೂಮ್ ಬಳಸಲು ತೆರಳಿದಾಗ ಡಸ್ಟ್‌ಬಿನ್‌ನಲ್ಲಿ ಹಿಡೆನ್ ಕ್ಯಾಮೆರಾ ಇರುವುದು ಪತ್ತೆಯಾಗಿದೆ.
ಮೊಬೈಲ್ ನಲ್ಲಿ ಕ್ಯಾಮೆರಾ ಆನ್ ಮಾಡಿ ರೆಕಾರ್ಡಿಂಗ್ ಗೆ ಇಡಲಾಗಿದ್ದು, ಫೋನ್ ಅಥವಾ ಯಾವುದೇ ಸಂದೇಶಗಳು ಬರುವುದನ್ನು ತಡೆಯಲು ಫ್ಲೈಟ್ ಮೋಡ್’ಗೆ ಹಾಕಲಾಗಿದೆ. ಡಸ್ಟ್ ಬಿನ್ ನ್ನು ಟಾಯ್ಲೆಟ್ ಸೀಟಿಗೆ ಎದುರಾಗಿ ಇರಿಸಲಾಗಿದೆ. ಇದರ ವಿಡಿಯೋವನ್ನು ಯುವತಿ ತನ್ನ ಫೋನ್ ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಫೋನ್ ಕೆಫೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಒಬ್ಬರಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ. ಬಳಿಕ ಆತನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಈ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಆರೋಪಿಯನ್ನು ಬಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.