ಉಡುಪಿ/ಚಿಕ್ಕಮಗಳೂರು: ಮಲೆನಾಡು ಮತ್ತು ಕರಾವಳಿಯಲ್ಲಿ ಭಾಗದಲ್ಲಿ ನಕ್ಸಲರ ಚುಟುವಟಿಕೆ ಮತ್ತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ನಕ್ಸಲ್ ನಿಗ್ರಹ ಪಡೆ ಕೂಡ ಚುರುಕುಗೊಂಡಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿದೆ. ವಿಕ್ರಮ್ ಗೌಡ ಸುಮಾರು 20 ವರ್ಷಗಳ ಹಿಂದೆ ನಕ್ಸಲೈಟ್ ಆಗಿದ್ದನು. ಕೇರಳದಲ್ಲಿ ಈತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಬಿ.ಜಿ ಕೃಷ್ಣಮೂರ್ತಿ ಬಳಿಕ ಕರ್ನಾಟಕದ ನಕ್ಸಲ್ ನಾಯಕತ್ವವನ್ನು ವಿಕ್ರಂ ಗೌಡ ವಹಿಸಿಕೊಂಡಿದ್ದಾನೆ. ಈತನ ತಂಡದ ಮೂವರು ಮೂವರು ಸಶಸ್ತ್ರಧಾರಿಯಾಗಿ ಬೈಂದೂರಿಗೆ ಆಗಮಿಸಿರುವ ಮಾಹಿತಿ ಲಭ್ಯವಾಗಿದೆ. ಈ ಮೂವರು ಗ್ರಾಮದ ಮನೆಗಳಿಗೂ ತೆರಳಿ ಹೋಗಿರುವುದಾಗಿ ಮಾಹಿತಿ ಸಿಕ್ಕಿದೆ. ನಕ್ಸಲರ ಓಡಾಟ ಮಾಹಿತಿ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದು, ವರ್ಷಗಳ ನಂತರ ಮತ್ತೆ ಬೈಂದೂರಿನಲ್ಲಿ ಕೂಂಬಿಂಗ್ ಸಾಧ್ಯತೆ ಇದೆ.
ನಕ್ಸಲ್ ಹುತಾತ್ಮ ದಿನ ಆಚರಿಸಲು ತಯಾರಿ
2005ರ ಫೆಬ್ರವರಿ 5 ರಂದು ಕಳಸ ತಾಲೂಕಿನ ಮೆಣಸಿನ ಹಾಡ್ಯದಲ್ಲಿ ರಾತ್ರಿ ಪೊಲೀಸರ ಎನ್ಕೌಂಟರ್ನಲ್ಲಿ ಸಾಕೇತ್ ಎಂಬ ನಕ್ಸಲ್ ಸಾವಿಗೀಡಾಗಿದ್ದನು. ಸಾಕೇತ್ ರಾಜನ್ ಸಾವಿಗೆ ರೆಡ್ ಸಲ್ಯೂಟ್ ದಿನ ಆಚರಿಸಲು ನಕ್ಸಲರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.