ಬೆಂಗಳೂರು: ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ತಮ್ಮ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ಕ್ಷೇತ್ರ ಗೊಂದಲದ ಬಗ್ಗೆ ಮಾತನಾಡಿ, ಕೋಲಾರದಲ್ಲಿ ಸರ್ವೆಗಳಲ್ಲಿ ಹಿನ್ನಡೆ ಆಗಿದೆ ಅನ್ನೋದು ಊಹಾಪೋಹ. ಉಹಾಪೋಹಗಳಿಗೆ ಬೆಲೆ ಇಲ್ಲ. ನನ್ನ ಕ್ಷೇತ್ರದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಒಂದೇ ಹೆಸರು ಇರುವ ಹಾಗೂ ಗೊಂದಲ ಇಲ್ಲದ ಕ್ಷೇತ್ರಗಳಲ್ಲಿ ಹೆಸರು ಫೈನಲ್ ಮಾಡಿದ್ದೀವಿ. ಮೊದಲ ಪಟ್ಟಿ 22 ಮಾರ್ಚ್ ಬೆಳಗ್ಗೆ ಪ್ರಕಟ ಆಗಲಿದೆ ಎಂದರು.
ವರುಣಾ ಅಥವಾ ಕೋಲಾರ ಸ್ಪರ್ಧೆಯ ಬಗ್ಗೆ ಮಾತನಾಡಿ, ವರುಣಾದಲ್ಲಿ ಒಂದೇ ಹೆಸರು ಇದೆ. ಯತೀಂದ್ರ ಇದ್ದಾನಲ್ಲ. ನಾನು ಎಲ್ಲಿ ನಿಂತುಕೊಳ್ಳಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತೆ. ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಂತುಕೊಳ್ಳುತ್ತೇನೆ ಎಂದರು.
ಮಾರ್ಚ್ 22 ರಂದು ಮೊದಲ ಪಟ್ಟಿ
ಮಾರ್ಚ್ 22 ರಂದು ಮೊದಲ ಪಟ್ಟಿ ಬಿಡುಗಡೆ ಆಗಲಿದೆ. ಮಾರ್ಚ್ 21 ಅಮಾವಾಸ್ಯೆ, 22 ಕ್ಕೆ ಯುಗಾದಿ. ಪಕ್ಷಕ್ಕೂ ಅಮಾವಾಸ್ಯೆಗೂ ಸಂಬಂಧ ಇಲ್ಲ. ಆದರೂ ಆ ದಿನ ಪಟ್ಟಿ ಪ್ರಕಟ ಆಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.