ಮನೆ ಕಾನೂನು ಆ್ಯಂಬುಲೆನ್ಸ್’ಗಳಲ್ಲಿ ಜಿಪಿಎಸ್ ಸಾಧನ ಅಳವಡಿಸಲು ತಯಾರಕರಿಗೆ ಹೈಕೋರ್ಟ್ ಸಲಹೆ

ಆ್ಯಂಬುಲೆನ್ಸ್’ಗಳಲ್ಲಿ ಜಿಪಿಎಸ್ ಸಾಧನ ಅಳವಡಿಸಲು ತಯಾರಕರಿಗೆ ಹೈಕೋರ್ಟ್ ಸಲಹೆ

0

ಕರ್ನಾಟಕದಲ್ಲಿ ತಯಾರಿಸಲ್ಪಡುವ ಆ್ಯಂಬುಲೆನ್ಸ್’ಗಳಿಗೆ ಜಿಪಿಎಸ್ ಸಾಧನ ಅಳವಡಿಸಲು ಆಂಬ್ಯುಲನ್ಸ್ ತಯಾರಕರಿಗೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಸಲಹೆ ಮಾಡಿದೆ.

ಹಾಲಿ ಮತ್ತು ಭವಿಷ್ಯದಲ್ಲಿ ಸೇವೆ ಆರಂಭಿಸಲಿರುವ ಆ್ಯಂಬುಲೆನ್ಸ್’ಗಳಿಗೆ (ಸರ್ಕಾರ/ಸರ್ಕಾರೇತರ) ಜಿಪಿಎಸ್ ಸಾಧನ ಅಳವಡಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಕರ್ನಾಟಕದಲ್ಲಿ ಆ್ಯಂಬುಲೆನ್ಸ್’ಗಳಿಗೆ ಜಿಪಿಎಸ್ ಸಾಧನ ಅಳವಡಿಸುವುದು ಪೂರ್ವಾಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಆಂಬುಲೆನ್ಸ್ ತಯಾರಕರಿಗೆ ನಿರ್ದೇಶಿಸಲು ನಾವು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡುತ್ತೇವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಪ್ರತಿಮಾ ಹೊನ್ನಾಪುರ ಅವರು “ಆ್ಯಂಬುಲೆನ್ಸ್’ಗಳಲ್ಲಿ ಜಿಪಿಎಸ್ ಸಾಧನ ಅಳವಡಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಮಾಸಿಕ ಪ್ರಗತಿ ವರದಿ ಸಲ್ಲಿಸಲು ಸಾರಿಗೆ ಮತ್ತು ಪ್ರಾದೇಶಿಕ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿ 2020ರ ಮಾರ್ಚ್’ನಲ್ಲಿ ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿದೆ” ಎಂದು ವಿವರಿಸಿದರು.

ಇದಕ್ಕೆ ಪೀಠವು “2020ರ ಮಾರ್ಚ್ 4ರ ಸುತ್ತೋಲೆಗೆ ಸಂಬಂಧಿಸಿದಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಿಗೆ ಇದುವರೆಗೆ ಎಷ್ಟು ವರದಿಗಳನ್ನು ಸಲ್ಲಿಸಲಾಗಿದೆ” ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಹೇಳಿದೆ.

ಸಕ್ಷಮ ಸಾರಿಗೆ ಪ್ರಾಧಿಕಾರವು ನಿರ್ದಿಷ್ಟ ಸುತ್ತೋಲೆಗಳನ್ನು ಹೊರಡಿಸಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸರ್ಕಾರಕ್ಕೆ ಪೀಠವು ನಿರ್ದೇಶಿಸಿದೆ. ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿರುವ ಪೀಠವು ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿದೆ.

ಎಲ್ಲಾ ಜಿಲ್ಲೆಗಳಲ್ಲೂ ಆ್ಯಂಬುಲೆನ್ಸ್ ಸಂಚಾರಿ ನಿಯಂತ್ರಣ ಕೊಠಡಿ ಆರಂಭಿಸಲು ಮತ್ತು ಎಲ್ಲಾ ಆ್ಯಂಬುಲೆನ್ಸ್’ಗಳನ್ನು ನಿಯಂತ್ರಣ ಕೊಠಡಿಯ ಜೊತೆ ಸಂಪರ್ಕ ಸಾಧಿಸಲು ಮನವಿಯಲ್ಲಿ ಕೋರಲಾಗಿದೆ.