ಮಂಗಳೂರು: ನಗರದ ಪದುವಾ ಜಂಕ್ಷನ್ ಬಳಿ ಸಂರಕ್ಷಿಸಲಾಗುತ್ತಿದ್ದ ಮಿಯಾವಾಕಿ ಅರಣ್ಯವನ್ನು ಕಡಿಯದಂತೆ ಹೈಕೋರ್ಟ್ ಆದೇಶಿಸಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿನ್ನಡೆ ಉಂಟಾಗಿದೆ.
ಮಂಗಳೂರಿನ ವನ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಸಿಂಜಿನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಬಯೋಕೊನ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನೆಟ್ಟು ಸಂರಕ್ಷಿಸಲಾಗುತ್ತಿದ್ದ 1000ಕ್ಕಿಂತ ಅಧಿಕ ಗಿಡ-ಮರಗಳಿಂದ ಕೂಡಿದ್ದ ಮಿಯಾವಾಕಿ ಅರಣ್ಯವನ್ನು ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಉದ್ದೇಶಕ್ಕಾಗಿ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಂಜಿನ್ ಇಂಟರ್ನ್ಯಾಷನಲ್ ಲಿಮಿಟೆಡ್, ಬಯೊಕೊನ್ ಫೌಂಡೇಷನ್ ಹಾಗೂ ವನ ಚಾರಿಟಬಲ್ ಟ್ರಸ್ಟ್ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಮುಹಮ್ಮದ್ ನವಾಜ್ ಅವರಿದ್ದ ಪೀಠವು ಅರ್ಜಿಯನ್ನು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
2022ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಬಯೋಕೂನ್ ಹಾಗೂ ಸಿಂಜಿನ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳನ್ನು ಸಂಪರ್ಕಿಸಿ ಸಿ.ಎಸ್.ಆರ್. ಫಂಡಿಂಗ್ ಮೂಲಕ ಮಂಗಳೂರಿನಲ್ಲಿ ಒಂದು ಅರ್ಬನ್ ಫಾರೆಸ್ಟ್/ಮಿಯಾವಾಕಿ ಅರಣ್ಯವನ್ನು ನಿರ್ಮಿಸಿ ಪೋಷಿಸುವಂತೆ ಬೇಡಿಕೆ ಇಟ್ಟಿತ್ತು. ಇದಕ್ಕಾಗಿ ಪದುವಾ ಜಂಕ್ಷನ್ ಬಳಿಯ ಸ್ಥಳವನ್ನು ಮಂಜೂರು ಮಾಡಿತ್ತು. ಅದರಂತೆ ಮಂಗಳೂರಿನ ವನ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಸದ್ರಿ ಪ್ರದೇಶದಲ್ಲಿ 1000ಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿತ್ತು.
ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಣ್ಯ ಬೆಳೆಸಿರುವ ಪ್ರದೇಶ ಪ್ರಾಧಿಕಾರಕ್ಕೆ ಸೇರಿದ್ದು, ಅಲ್ಲಿ ಬೆಳೆಸಿರುವ ಮರಗಳನ್ನು ಕಡಿದು ತೆರವುಗೊಳಿಸುವಂತೆ ಆದೇಶಿಸಿತ್ತು.
ವಾದಿಗಳ ಪರವಾಗಿ ಬೆಂಗಳೂರಿನ ಯುವ ವಕೀಲರಾದ ಅಶ್ವಿನ್ ಕುಟಿನ್ಹ, ಆರ್.ಪಿ ಡಿಸೋಜಾ ಅಸೋಸಿಯೇಟ್ಸ್ ವಾದ ಮಂಡಿಸಿದರು.