ಮನೆ ಕಾನೂನು ಪದೋನ್ನತಿ ನೀಡಲು ವಿಳಂಬ ಧೋರಣೆ ಅನುಸರಿಸಿದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಕಿಡಿ; ದಂಡ ವಿಧಿಸುವ...

ಪದೋನ್ನತಿ ನೀಡಲು ವಿಳಂಬ ಧೋರಣೆ ಅನುಸರಿಸಿದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಕಿಡಿ; ದಂಡ ವಿಧಿಸುವ ಎಚ್ಚರಿಕೆ

0

ಅನುದಾನಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಪದೋನ್ನತಿ ನೀಡಲು ವಿಳಂಬ ಧೋರಣೆ ಅನುಸರಿಸಿರುವುದಲ್ಲದೇ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರದ ನಡೆಗೆ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ “ಅನಗತ್ಯವಾದ ಅರ್ಜಿ ಸಲ್ಲಿಸಿರುವುದಕ್ಕೆ ದಂಡ ವಿಧಿಸಬೇಕಾಗುತ್ತದೆ. ನಿಮ್ಮ ಅಧಿಕಾರಿಗಳು ನಿದ್ರಿಸುತ್ತಿದ್ದಾರೆ” ಎಂದು ಸರ್ಕಾರದ ವಿರುದ್ಧ ಮೌಖಿಕವಾಗಿ ಕಿಡಿಕಾರಿದೆ.

ಪ್ರತಿವಾದಿ ಬೆಂಗಳೂರಿನ ಜಿ ಬೈರಪ್ಪ ಅವರ ಪದೋನ್ನತಿ ಪರಿಗಣನೆಯು ಬಾಕಿ ಇದ್ದ ವೇಳೆಯೇ ಅವರು ನಿವೃತ್ತಿ ಹೊಂದಿರುವುದರಿಂದ ಅವರಿಗೆ ಸಹಾಯಕ ಹುದ್ದೆಯಿಂದ ದ್ವಿತೀಯ ದರ್ಜೆ ಹುದ್ದೆಗೆ ಪದೋನ್ನತಿ ನೀಡಲಾಗದು ಎಂಬ ಕಾಲೇಜು ಶಿಕ್ಷಣ ಇಲಾಖೆಯ ದೃಢೀಕರಣವನ್ನು ವಜಾ ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

“ರಾಜ್ಯ ಸರ್ಕಾರದ ಪ್ರಾಧಿಕಾರ ಅಥವಾ ಇಲಾಖೆಯು ಸಕಾರಣದಿಂದ ನಿರ್ದಿಷ್ಟ ಕಾಲದಲ್ಲಿ ಕ್ರಮಕೈಗೊಂಡಿದ್ದರೆ ಪಕ್ಷಕಾರರು ರಾಜ್ಯ ಸರ್ಕಾರದ ಆಧಾರರಹಿತ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಅವಶ್ಯತೆ ಇರುತ್ತಿರಲಿಲ್ಲ. ಸರ್ಕಾರದ ಪ್ರಾಧಿಕಾರಗಳ ಇಂಥ ನಡೆಯಿಂದಾಗಿ ಪಕ್ಷಕಾರರು ಅತ್ತಿಂದಿತ್ತ ಸುತ್ತುವಂತಾಗಿದೆ. ಅಂತಿಮವಾಗಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡು, ಹಣ ಖರ್ಚು ಮಾಡಿಕೊಂಡು ನ್ಯಾಯಾಲಯದ ಮೆಟ್ಟಿಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಬೇಸರಿಸಿದೆ.

ಅಲ್ಲದೇ, “ರಾಜ್ಯ ಸರ್ಕಾರದ ಪ್ರಾಧಿಕಾರಗಳ ನಡೆಯು ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಿದ್ದು, ಇದು ಸ್ವಾಗತಾರ್ಹವಲ್ಲ. ಈ ಕಾರಣಕ್ಕಾಗಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ವಜಾಕ್ಕೆ ಅರ್ಹವಾಗಿದೆ. ಭವಿಷ್ಯದಲ್ಲಿ ಸರ್ಕಾರದ ಅಧಿಕಾರಿ ಮತ್ತು ಪ್ರಾಧಿಕಾರಗಳು ಸಮರ್ಥನೀಯ ಕಾಲಮಿತಿಯಲ್ಲಿ ಕೆಲಸ ಮಾಡುವ ಮೂಲಕ ಮೇಲೆ ಹೇಳಿದ ಪರಿಸ್ಥಿತಿ ತಪ್ಪಿಸುತ್ತಾರೆ ಎಂಬ ಭರವಸೆ ಮತ್ತು ಆಶಾಭಾವನೆ ಹೊಂದಿದ್ದೇವೆ” ಎಂದು ಪೀಠವು ಆಶಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಬೈರಪ್ಪ ಅವರು ಶಿವಮೊಗ್ಗದ ಅನುದಾನಿತ ರಾಷ್ಟ್ರೀಯ ಶಿಕ್ಷಣ ಸೊಸೈಟಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, 2013ರ ಮಾರ್ಚ್ 15ರಂದು ಅವರಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ (ಎಸ್’ಡಿಎ) ಪದೋನ್ನತಿ ನೀಡಲಾಗಿತ್ತು. ಬೈರಪ್ಪ ಅವರು 2013ರ ಮಾರ್ಚ್ 18ರಂದು ಎಸ್’ಡಿಎ ಹುದ್ದೆಗೆ ವರದಿ ಮಾಡಿಕೊಂಡಿದ್ದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪದೋನ್ನತಿಗೆ ರಾಜ್ಯ ಸರ್ಕಾರವು ಅನುಮತಿಸಬೇಕು. ಹೀಗಾಗಿ, ರಾಷ್ಟ್ರೀಯ ಶಿಕ್ಷಣ ಸೊಸೈಟಿಯು ಎಲ್ಲಾ ದಾಖಲೆಗಳನ್ನು ಸೇರಿಸಿ ಪದೋನ್ನತಿ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಮಧ್ಯೆ, ಬೈರಪ್ಪ ಅವರು ವಯೋಮಿತಿ ಮೀರಿದ್ದರಿಂದ ನಿವೃತ್ತಿ ಹೊಂದಿದ್ದರು. ಹೀಗಾಗಿ, ಬೈರಪ್ಪ ಅವರಿಗೆ ಎಸ್ಡಿಎ ಹುದ್ದೆಗೆ ಪದೋನ್ನತಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು.

ಬೈರಪ್ಪ ಅವರ ಪದೋನ್ನತಿ ತಿರಸ್ಕರಿಸಿರುವ ರಾಜ್ಯ ಸರ್ಕಾರವು ತಪ್ಪಾದ ನಿರ್ಧಾರವಾಗಿದೆ. 2013ರ ಮಾರ್ಚ್ 15ರಂದು ಬೈರಪ್ಪ ಅವರಿಗೆ ಪದೋನ್ನತಿ ನೀಡಿಲಾಗಿದ್ದು, ಈ ಸಂದರ್ಭದಲ್ಲಿ ಅವರು ಸೇವೆಯಲ್ಲಿದ್ದರು. ಇದನ್ನು ತಕ್ಷಣ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಕೌಂಟೆಂಟ್ ಜನರಲ್ ಅವರು ನೀಡಿರುವ ಒಪ್ಪಿಗೆ ಪರಿಗಣಿಸಲು ರಾಜ್ಯ ಸರ್ಕಾರವು ಮೂರು ವರ್ಷಗಳನ್ನು ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಅವರು ನಿವೃತ್ತಿ ಹೊಂದಿರುವ ವಿಚಾರವನ್ನು ಪರಿಗಣಿಸಲಾಗದು. ಹೀಗಾಗಿ, ಬೈರಪ್ಪ ಅವರ ಪದೋನ್ನತಿ ವಿಚಾರವನ್ನು ಪುನರ್ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಸಕದಸ್ಯ ಪೀಠವು 2020ರ ಡಿಸೆಂಬರ್ 1ರಂದು ಆದೇಶಿಸಿತ್ತು.

ಈ ಆಧಾರದಲ್ಲಿ ಕಾಲೇಜು ಶಿಕ್ಷಣ ಇಲಾಖೆಯು 2016ರ ಮೇ 19ರಂದು ಹೊರಡಿಸಿದ್ದ ದೃಢೀಕರಣವನ್ನು ನ್ಯಾಯಾಲಯ ವಜಾ ಮಾಡಿತ್ತು. ಮೂರು ತಿಂಗಳಲ್ಲಿ ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಗೆ ಆದೇಶಿಸಿತ್ತು. ಬೈರಪ್ಪ ಅವರ ಪದೋನ್ನತಿಗೆ ಒಪ್ಪಿಗೆ ನೀಡಿದರೆ ಅವರು ಎಲ್ಲಾ ರೀತಿಯ ಸೌಲಭ್ಯಗಳಿಗೂ ಅರ್ಹವಾಗಲಿದ್ದಾರೆ ಎಂದು ಏಕಸದಸ್ಯ ಪೀಠವು ಭಾಗಶಃ ಅರ್ಜಿ ಮಾನ್ಯ ಮಾಡಿತ್ತು. ಇದನ್ನು ಈಗ ವಿಭಾಗೀಯ ಪೀಠವು ಮಾನ್ಯ ಮಾಡಿದೆ.