ನಿಗದಿತ ಅವಧಿಯಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಬ್ಯಾಂಕ್ಗೆ ಸಲ್ಲಿಸದೇ ಹೋದರೆ ಅಂತಹ ಸಂದರ್ಭಗಳಲ್ಲಿ ಡಿಡಿ ನೀಡಿದ ಗ್ರಾಹಕರ ಖಾತೆಗೆ ಸ್ವಯಂಚಾಲಿತವಾಗಿ ಹಣ ಮರುಪಾವತಿಯಾಗುವಂತೆ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ.
ದೊಡ್ಡಬಳ್ಳಾಪುರದ ಸ್ಪಿನ್ನಿಂಗ್ ಮಿಲ್ಸ್ ಕಂಪನಿಯ ನಿರ್ದೇಶಕ ಎ ಅಭಿಷೇಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಮಾನ್ಯ ಮಾಡಿದೆ.
“ಡಿಮ್ಯಾಂಡ್ ಡ್ರಾಫ್ಟ್ ಅನ್ನು ಪಡೆದಿರುವವರು ನಿರ್ದಿಷ್ಟ ಅವಧಿಯಲ್ಲಿ ಅದನ್ನು ಬ್ಯಾಂಕ್ಗೆ ಸಲ್ಲಿಸದೇ ಹೋದರೆ ಅಂತಹ ಸಂದರ್ಭಗಳಲ್ಲಿ ಡಿಡಿಯ ಸ್ಥಿತಿ ಏನಾಗದಲಿದೆ ಎಂಬ ಬಗ್ಗೆ ಆರ್ಬಿಐ ಮಾರ್ಗಸೂಚಿ ರೂಪಿಸಬೇಕು. ಒಂದು ವೇಳೆ ಡಿಡಿ ಪಡೆದವರು ಅದನ್ನು ಬ್ಯಾಂಕ್ಗೆ ಸಲ್ಲಿಸದೇ ಹೋದರೆ ನಿರ್ದಿಷ್ಟ ಅವಧಿ ಮುಗಿದ ಬಳಿಕ ಆ ಡಿಡಿಯ ಮೊತ್ತ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳಬೇಕು” ಎಂದು ಆದೇಶಿಸಿದೆ.
2018ರಿಂದ ಅನ್ವಯವಾಗುವಂತೆ ಐಸಿಐಸಿಐ ಬ್ಯಾಂಕ್ ಶೇ.18ರ ಬಡ್ಡಿ ಸಹಿತ ಡಿಡಿ ಮೊತ್ತವನ್ನು ಅರ್ಜಿದಾರರಿಗೆ ಪಾವತಿಸಬೇಕು ಮತ್ತು ಅರ್ಜಿದಾರರಿಗೆ ದಂಡದ ರೂಪದಲ್ಲಿ 5 ಲಕ್ಷ ರೂಪಾಯಿಯನ್ನು 15 ದಿನಗಳಲ್ಲಿ ಪಾವತಿಸಬೇಕು ಎಂದು ನಿರ್ದೇಶಿಸಿದೆ.
“ಬ್ಯಾಂಕ್ ಯಾವ ಕಾನೂನಿನಡಿ ಈ ರೀತಿ ಡಿಡಿ ಮೊತ್ತ ಮರುಪಾವತಿಗೆ ನಿರಾಕರಿಸಿದೆ ಎಂಬುದನ್ನು ಸಾಬೀತುಪಡಿಸಿಲ್ಲ. ಡಿಡಿ ಪಡೆದಿದ್ದವರೇ ಮೂಲ ಡಿಡಿಯನ್ನು ಸಲ್ಲಿಸಿ, ಅದನ್ನು ರದ್ದುಗೊಳಿಸಲು ಕೋರಿದರೂ ಬ್ಯಾಂಕ್ ಒಪ್ಪದಿರುವುದು ಆಶ್ಚರ್ಯ ಮೂಡಿಸಿದೆ. ಯಾರು ಡಿಡಿ ಪಡೆದಿದ್ದರೊ ಅವರದ್ದು ಏನೂ ತಕರಾರು ಇಲ್ಲ, ಆದರೂ ಸಹ ಅವರ ಎನ್ಒಸಿ ಇಲ್ಲದೆ ಡಿಡಿ ರದ್ದುಗೊಳಿಸಲಾಗದು ಎಂಬ ಬ್ಯಾಂಕ್ ಕ್ರಮ ಒಪ್ಪಲಾಗದು. ಬ್ಯಾಂಕ್ ಗ್ರಾಹಕರ ಹಿತವನ್ನು ರಕ್ಷಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.
“ಬ್ಯಾಂಕಿಂಗ್ ಒಂಬಡ್ಸಮನ್ ಕೂಡ ಸರಿಯಾದ ರೀತಿಯಲ್ಲಿ ನಡೆದುಕೊಂಡಿಲ್ಲ. ಸ್ವತಂತ್ರ ಸಂಸ್ಥೆಯಾಗಿರುವ ಒಂಬಡ್ಸ್ಮನ್ ತನಿಖೆ ನಡೆಸಿ ಗ್ರಾಹಕರ ಹಿತ ಕಾಯುವಂತಹ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕಿತ್ತು” ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ದೊಡ್ಡಬಳ್ಳಾಪುರದಲ್ಲಿ ಸ್ಪಿನ್ನಿಂಗ್ ಮಿಲ್ ಹೊಂದಿದ್ದ ಅರ್ಜಿದಾರರು ಐಸಿಐಸಿಐ ಬ್ಯಾಂಕಿನಲ್ಲಿ ಚಾಲ್ತಿ ಖಾತೆ ಹೊಂದಿದ್ದರು. 2010ರಲ್ಲಿ 50 ಲಕ್ಷ ರೂಪಾಯಿಗೆ ಪಿ ಬಚ್ಚೇಗೌಡ ಎಂಬುವರ ಹೆಸರಿಗೆ ಡಿಡಿ ಪಡೆದಿದ್ದರು. ಆದರೆ, ಅರ್ಜಿದಾರರು ಮತ್ತು ಬಚ್ಚೇಗೌಡ ನಡುವಿನ ಒಪ್ಪಂದ ಮುರಿದು ಬಿದ್ದು, ಕ್ರಯ ಒಪ್ಪಂದ ರದ್ದಾಗಿತ್ತು. ಆ ಕಾರಣದಿಂದಾಗಿ ಕಂಪನಿ 2018ರಲ್ಲಿ ಮೂಲ ಡಿಡಿ ಸಲ್ಲಿಸಿ, ಆ ಡಿಡಿಯನ್ನು ರದ್ದುಗೊಳಿಸಿ ಆ ಮೊತ್ತವನ್ನು ತಮ್ಮ ಖಾತೆಗೆ ಜಮೆ ಮಾಡಬೇಕು ಎಂದು ಕೋರಿದ್ದರು. ಆದರೆ ಬ್ಯಾಂಕ್ ಆದಕ್ಕೆ ಒಪ್ಪಿರಲಿಲ್ಲ. ಹಾಗಾಗಿ ಅರ್ಜಿದಾರರು ಒಂಬಡ್ಸ್ಮನ್ ಮೊರೆ ಹೋಗಿದ್ದರು. ಆದರೆ ಒಂಬುಡ್ಸ್ಮನ್ ಕೂಡ ದೂರನ್ನು ಪುರಸ್ಕರಿಸಲಿಲ್ಲ, ಹೀಗಾಗಿ ಅರ್ಜಿದಾರರು ಬ್ಯಾಂಕ್ ಉದ್ದೇಶಪೂರ್ವಕವಾಗಿ ಡಿಡಿ ಮೊತ್ತ ಜಮೆ ಮಾಡುತ್ತಿಲ್ಲ, ಇದು ನಿಯಮಬಾಹಿರ ಕ್ರಮ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.