ಬೆಂಗಳೂರು : ಲೋಕೋಪಯೋಗಿ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಇಲಾಖೆಯಲ್ಲಿ 2016-17ನೇ ಸಾಲಿನಿಂದ 2021-22ನೇ ಸಾಲಿನವರೆಗೆ ನಡೆದಿರುವ ಟೆಂಡರ್ ಪ್ರಕ್ರಿಯೆಯಲ್ಲಿನ ಅವ್ಯವಹಾರಗಳು, ಅನಧಿಕೃತವಾಗಿ ಬಿಲ್ಗಳನ್ನ ಬಿಡುಗಡೆ ಮಾಡಿರುವ ಸಂಬಂಧ ತನಿಖೆಗೆ ಉನ್ನತ ಮಟ್ಟದ ತನಿಖೆ ನಡೆಸಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.
ಸಾಮಾಜಿಕ ಹೋರಾಟಗಾರ ಗುರುನಾಥ್ ವಡ್ಡೆ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ. ಐ ಅರುಣ್ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅಲ್ಲದೇ, ಅರ್ಜಿದಾರರು ಸಾಮಾನ್ಯ ರೂಪದ ಆರೋಪಗಳನ್ನು ಅರ್ಜಿಯಲ್ಲಿ ವಿವರಿಸಿದ್ದಾರೆ. ಇಂತಹ ವಿವರಗಳ ಆಧಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಯಲ್ಲಿ ವಿಚಾರಣೆಗೆ ಪರಿಗಣಿಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದಾಗಿದೆ. ಬದಲಾಗಿ ಯಾವುದಾದರು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ಪ್ರಕರಣಗಳಿದ್ದಲ್ಲಿ, ಕಾನೂನು ಹೋರಾಟ ಮುಂದುವರೆಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಪೀಠ ಅರ್ಜಿದಾರರ ಪರ ವಕೀಲರಿಗೆ, ಅಕ್ರಮಗಳು ನಡೆದಿವೆ ಎಂಬುದಕ್ಕೆ ಪ್ರಾಥಮಿಕ ಸಾಕ್ಷ್ಯಾಧಾರಗಳು ಯಾವುದಿದೆ ಎಂದು ಪೀಠ ಪ್ರಶ್ನಿಸಿತು. ಜತೆಗೆ, ಇಂತಹ ಅಕ್ರಮಗಳಿಂದ ಪರಿಹಾರ ಬೇಕಾದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿ, ಆ ಸಂಬಂಧ ಅವರು ಪರಿಶೀಲಿಸಲಿದ್ದಾರೆ ಎಂದು ತಿಳಿಸಿತು. ಅಲ್ಲದೇ, ಸರ್ಕಾರದ ವಿರುದ್ಧ ಮಾಡಿದ ಪ್ರತಿಯೊಂದು ದೂರಿನ ಬಗ್ಗೆ ತನಿಖೆಗೆ ನಾವು ಅವಕಾಶ ನೀಡಿದರೆ ಆಡಳಿತವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಿರುವ ಅಕ್ರಮಗಳ ಕುರಿತಂತೆ ವರದಿ ಆಧಾರವನ್ನಾಗಿಸಿಕೊಂಡು, ಅರ್ಜಿದಾರರು ರಾಜ್ಯ ಸರ್ಕಾರದಿಂದ ತನಿಖೆ ನಡೆಸಬೇಕು ಎಂದು ಕೋರಿದ್ದರು.