ಮನೆ ಕಾನೂನು ಕೆಎಂಎಫ್‌ನಿಂದ ನಂದಿನಿ ಹಾಲು, ಮೊಸರು ದರ ಪರಿಷ್ಕರಣೆ ಪ್ರಶ್ನಿಸಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

ಕೆಎಂಎಫ್‌ನಿಂದ ನಂದಿನಿ ಹಾಲು, ಮೊಸರು ದರ ಪರಿಷ್ಕರಣೆ ಪ್ರಶ್ನಿಸಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

0

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

Join Our Whatsapp Group

ಬೆಂಗಳೂರಿನ ಬಿಲೇಕಹಳ್ಳಿಯ ಸೋಮೇಶ್ವರ ಲೇಔಟ್‌ನ ಲೆಕ್ಕ ಪರಿಶೋಧಕಿ ಆರ್‌ ಅಮೃತಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠ ಬುಧವಾರ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಹೆಚ್ಚುವರಿ 50 ಎಂಎಲ್‌ ನೀಡುತ್ತಿರುವುದರಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಲಾಗಿದೆ ಎಂಬ ಕೆಎಂಎಫ್‌ ವಾದ ತರ್ಕಬದ್ಧವಲ್ಲ ಮತ್ತು ನ್ಯಾಯೋಚಿತವೂ ಅಲ್ಲ. ಇದು ವಾಣಿಜ್ಯ ಕೌಶಲದ ನಿಯಮಗಳಿಗೆ ವಿರುದ್ಧವಾಗಿದೆ. ಅಂತೆಯೇ, ಸಂವಿಧಾನದ 14ನೇ (ಸಮಾನತೆ) ವಿಧಿಗೆ ವಿರುದ್ಧವಾಗಿದೆ. ದೇಶದ ಯಾವುದೇ ಹಾಲು ಒಕ್ಕೂಟ ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ. ಹೀಗಾಗಿ, ಕೆಎಂಎಫ್‌ ಕ್ರಮವನ್ನು ರದ್ದುಪಡಿಸಬೇಕು” ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಬೆಲೆ ಏರಿಕೆಯು ತಜ್ಞರ ಅಭಿಪ್ರಾಯ ಹಾಗೂ ಸರ್ಕಾರದ ನಿರ್ದಿಷ್ಟ ನೀತಿಗಳಿಂದ ನಿರ್ಧರಿತವಾಗಿರುತ್ತದೆ. ಶಾಸನಬದ್ಧ ನೀತಿಯ ಉಲ್ಲಂಘನೆಯಾದ ಸಂದರ್ಭದಲ್ಲಿ ಮಾತ್ರವೇ ನ್ಯಾಯಾಂಗ ಪರಿಶೀಲನೆಗೆ ಅವಕಾಶವಿರುತ್ತದೆ. ಇಲ್ಲಿ ವಾಣಿಜ್ಯ ಉದ್ದೇಶದಿಂದ ತಜ್ಞರ ಅಭಿಪ್ರಾಯದೊಂದಿಗೆ ಹೆಚ್ಚಳ ಮಾಡಲು ಕೆಎಂಎಫ್‌ ನಿರ್ಧಾರ ಕೈಗೊಂಡಿದೆ. ಇಂತಹ ನಿರ್ಧಾರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನೆ ಮಾಡಲಾಗದು ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿ ಆದೇಶಿಸಿತು.