ಮನೆ ಕಾನೂನು ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ ನಿಂದ ಜಾಮೀನು

ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ ನಿಂದ ಜಾಮೀನು

0

ಬೆಂಗಳೂರು: ಚಿನ್ನ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪೊಲೀಸ್‌ ವಶದಲ್ಲಿರುವ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ.ಎನ್‌. ಹರೀಶ್‌ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್‌, ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಚಂದ್ರಾಲೇಔಟ್‌ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿದೆ.

Join Our Whatsapp Group

ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ ರದ್ದುಪಡಿಸುವಂತೆ ಐಶ್ವರ್ಯ ಗೌಡ ಹಾಗೂ ಆಕೆಯ ಪತಿ ಕೆ.ಎನ್‌. ಹರೀಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ಪೀಠ ವಿಚಾರಣೆ ನಡೆಸಿದೆ.

ನಂತರ ಈ ಆದೇಶ ಪ್ರಕಟಿಸಿದೆ. ಆರೋಪಿಗಳು ಪೊಲೀಸರ ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಹೈಕೋರ್ಟ್‌ ಷರತ್ತು ವಿಧಿಸಿದೆ. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಚಂದ್ರಾಲೇಔಟ್‌ ಠಾಣಾ ಪೊಲೀಸರು ಮತ್ತು ದೂರುದಾರೆ ವನಿತಾ ಐತಾಳ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ವಿಚಾರಣೆಗೆ ಸಹಕರಿಸಿದರೂ ಬಂಧನ: ಅರ್ಜಿದಾರರು ಪ್ರಕರಣ ಸಂಬಂಧ ಪೊಲೀಸರು ನೀಡಿದ್ದ ನೋಟಿಸ್‌ಗೆ ಪೂರಕವಾಗಿ ಸ್ಪಂದಿಸಿ, ಸ್ವ ಇಚ್ಛೆಯಿಂದ ಠಾಣೆಗೆ ತೆರಳಿ ತನಿಖೆಗೆ ಸಹಕಾರ ನೀಡಿದ್ದರು. ಆದರೆ, ಪೊಲೀಸರು ಅರ್ಜಿದಾರರನ್ನು ಏಕಾಏಕಿ ಬಂಧಿಸಿದ್ದಾರೆ. ಪೊಲೀಸರು ಬಂಧನಕ್ಕೆ ಲಿಖೀತವಾಗಿ ಕಾರಣಗಳನ್ನು ಅರ್ಜಿದಾರರಿಗೆ ನೀಡಿಲ್ಲ. ಇದು ಸುಪ್ರೀಂ ಕೋರ್ಟ್‌ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಹೀಗಾಗಿ ಅರ್ಜಿದಾರರ ಬಂಧನವು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಅರ್ಜಿದಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚನೆ ನೀಡಿ ಪೊಲೀಸರಿಗೆ ಆದೇಶಿಸಿದೆ.