ಮನೆ ಕಾನೂನು ಕೊಲೆ ಪ್ರಕರಣದ ಅಪರಾಧಿಗೆ ಮಗು ಪಡೆಯಲು 30 ದಿನ ಪೆರೋಲ್‌ ಮಂಜೂರು ಮಾಡಿದ ಹೈಕೋರ್ಟ್‌

ಕೊಲೆ ಪ್ರಕರಣದ ಅಪರಾಧಿಗೆ ಮಗು ಪಡೆಯಲು 30 ದಿನ ಪೆರೋಲ್‌ ಮಂಜೂರು ಮಾಡಿದ ಹೈಕೋರ್ಟ್‌

0

ಜೈಲು ಶಿಕ್ಷೆ ಅನುಭವಿಸುತ್ತಿರುವ ಸಮಯದಲ್ಲೇ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಅಪರಾಧಿಗೆ ಅವಕಾಶ ಮಾಡಿಕೊಟ್ಟಿದ್ದ ಕರ್ನಾಟಕ ಹೈಕೋರ್ಟ್‌, ಇದೀಗ ಮಗು ಹೊಂದಲು ಒಂದು ತಿಂಗಳು ಪೆರೋಲ್‌ ಮಂಜೂರು ಮಾಡಿ ಸೋಮವಾರ ಆದೇಶಿಸಿದೆ.

Join Our Whatsapp Group

ಪತ್ನಿಯೊಂದಿಗೆ ಸಾಂಸಾರಿಕ ಜೀವನ ನಡೆಸಿ ಮಗು ಪಡೆಯುವುದಕ್ಕಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತನಾಗಿರುವ ಕೋಲಾರದ ಆನಂದ್‌ಗೆ ಜೂನ್‌ 5ರಿಂದ 30 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಮಗು ಪಡೆಯಲು ಅಪರಾಧಿಯಾಗಿರುವ ಪತಿ ಆನಂದ್‌ ಅನ್ನು 90 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸುವಂತೆ ಕೋರಿ ಆತನ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ಪೀಠವು “ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು ಅರ್ಜಿದಾರೆಯ ಪತಿಯನ್ನು ಜೂನ್‌ 5ರಿಂದ 30 ದಿನಗಳ ಕಾಲ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆ ಮಾಡಬೇಕು. ಈ ಅವಧಿಯಲ್ಲಿ ಆನಂದ್‌ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್‌ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. 30 ದಿನಗಳ ನಂತರ ಪೆರೋಲ್‌ ಷರತ್ತುಗಳನ್ನು ಪಾಲಿಸಿದ್ದಲ್ಲಿ, ಆದರ ಆಧಾರದ ಮೇಲೆ ಮತ್ತೆ 60 ದಿನಗಳ ಕಾಲ ಪೆರೋಲ್‌ ವಿಸ್ತರಣೆಗೆ ಆನಂದ್‌ ಹಾಗೂ ಅರ್ಜಿದಾರೆ ಕೋರಬಹುದು” ಎಂದು ನಿರ್ದೇಶಿಸಿದೆ.

ಅರ್ಜಿದಾರೆಯ ಪರ ವಕೀಲ ಡಿ ಮೋಹನ್‌ ಕುಮಾರ್‌ ಅವರು “ಆನಂದ್‌ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅರ್ಜಿದಾರೆಯನ್ನು ಮದುವೆಯಾಗಲು ಆನಂದ್‌ ಅನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಈ ಹಿಂದೆ ಹೈಕೋರ್ಟ್‌ ಆದೇಶಿಸಿತ್ತು. ಸದ್ಯ ದಂಪತಿ ಮಗು ಮಾಡಿಕೊಳ್ಳಲು ಇಚ್ಛಿಸಿದ್ದಾರೆ. ಅದಕ್ಕಾಗಿ ಆನಂದ್‌ಗೆ 90 ದಿನ ಪೆರೋಲ್‌ ಮಂಜೂರು ಮಾಡಬೇಕು. ಈ ಕುರಿತ ಅರ್ಜಿದಾರೆ ಸಲ್ಲಿಸಿರುವ ಮನವಿ ಪತ್ರವನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದ್ದಾರೆ” ಪೀಠಕ್ಕೆ ವಿವರಿಸಿದರು.

ಪ್ರಾಸಿಕ್ಯೂಷನ್‌ ಪರ ವಕೀಲರು, ಅರ್ಜಿದಾರೆಯ ಮನವಿ ಪುರಸ್ಕರಿಸಬಹುದಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣದ ಹಿನ್ನೆಲೆ: ಕೊಲೆ ಪ್ರಕರಣವೊಂದರಲ್ಲಿ ಕೋಲಾರದ ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ 2019ರಲ್ಲಿ ಕೋಲಾರದ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಆದೇಶಿಸಿತ್ತು. ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿ 2023ರಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು.

ಜೈಲಿಗೆ ಹೋಗುವ ಮುನ್ನವೇ ಆನಂದ್‌ ಮತ್ತು ಅರ್ಜಿದಾರೆ ಪರಸ್ಪರ ಪ್ರೀತಿಸುತ್ತಿದ್ದರು. ಜೈಲಿಗೆ ಹೋದ ನಂತರ ಅವರ ಪ್ರೀತಿ ಮುಂದುವರಿದಿತ್ತು. ಮದುವೆಯಾಗಲು ಅವರು ನಿಶ್ಚಯಿಸಿದ್ದರು. ಅರ್ಜಿದಾರೆ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್‌, ಮದುವೆಯಾಗಲು ಆನಂದ್‌ನನ್ನು 2023ರ ಮಾರ್ಚ್‌ 31ರಿಂದ 80 ದಿನ ಪೆರೋಲ್‌ ಮೇಲೆ ಬಿಡುಗಡೆಗೊಳಿಸಲು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಿಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಮಗು ಪಡೆಯಲು ಪೆರೋಲ್‌ ಮಂಜೂರು ಮಾಡಿದೆ.