ಮನೆ ಕಾನೂನು ಮಕ್ಕಳ ಹೆಸರು ಬದಲಾವಣೆ‌ ನೋಂದಣಿಗೆ ಮಾರ್ಗಸೂಚಿ ರೂಪಿಸಿ ಹೈಕೋರ್ಟ್ ಮಹತ್ವದ ಆದೇಶ

ಮಕ್ಕಳ ಹೆಸರು ಬದಲಾವಣೆ‌ ನೋಂದಣಿಗೆ ಮಾರ್ಗಸೂಚಿ ರೂಪಿಸಿ ಹೈಕೋರ್ಟ್ ಮಹತ್ವದ ಆದೇಶ

0

ಬೆಂಗಳೂರು: ಮಕ್ಕಳ ಹೆಸರು ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲದ‌ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ಮಕ್ಕಳ ಹೆಸರು ಬದಲಾವಣೆಗೆ ಹೊಸ ಮಾರ್ಗಸೂಚಿಯನ್ನು ರೂಪಿಸಿದೆ. 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚಿಸಿದೆ. ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ಶುಕ್ರವಾರ ಆದೇಶ ಹೊರಡಿಸಿದೆ.

Join Our Whatsapp Group

ಅದ್ರಿತ್ ಭಟ್ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಿಸಲು ಕೋರಲಾಗಿತ್ತು. ಆದರೆ ಉಡುಪಿ ಜನನ ನೋಂದಣಾಧಿಕಾರಿಗಳು ನಿರಾಕರಿಸಿದ ಹಿನ್ನೆಲೆ ರಿಟ್ ಸಲ್ಲಿಕೆ ಮಾಡಲಾಗಿತ್ತು. ಇಂದು ವಿಚಾರಣೆ ಮಾಡಿದ ಹೈಕೋರ್ಟ್, ಮಗುವಿನ ಹೆಸರು ಬದಲಾವಣೆಗೆ ತಂದೆ ತಾಯಿ ಪ್ರಮಾಣಪತ್ರ ಸಲ್ಲಿಸಬೇಕು. ತಂದೆ ತಾಯಿಯ ಗುರುತು ಧೃಡಪಟ್ಟ ನಂತರ ಹೆಸರು ಬದಲಾವಣೆ ಮಾಡಬಹುದಾಗಿದೆ. ಆದರೆ ಹೊಸ ಹೆಸರಿನೊಂದಿಗೆ, ಹಳೆಯ ಹೆಸರೂ ದಾಖಲೆಯಲ್ಲಿರಬೇಕು. ಇದರಿಂದ ದುರುದ್ದೇಶದ ಹೆಸರು ಬದಲಾವಣೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ.

ವಯಸ್ಕರ ಹೆಸರು ಬದಲಾವಣೆಗೂ ಇದೇ ಪದ್ಧತಿ ಅನುಸರಿಸಬಹುದು. ಸರ್ಕಾರ ಸೂಕ್ತ ನಿಯಮ ರೂಪಿಸುವವರೆಗೂ ಈ ನಿರ್ದೇಶನ ಪಾಲಿಸಬೇಕು ಎಂದು ಜನನ ನೋಂದಣಾಧಿಕಾರಿಗಳಿಗೆ ನ್ಯಾ.ಎನ್.ಎಸ್.ಸಂಜಯ್ ಗೌಡ ಸೂಚನೆ ನೀಡಿದ್ದಾರೆ.

ಓರ್ವ ವ್ಯಕ್ತಿಗೆ ಹೊಸ ಹೆಸರನ್ನು ನೀಡಲು ನಿರ್ಧರಿಸುವುದು ಅಥವಾ ಈಗಾಗಲೇ ಹೆಸರನ್ನು ನೀಡಿದ್ದರೂ ಹೆಸರನ್ನು ಬದಲಾಯಿಸಲು ನಿರ್ಧರಿಸುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. ವಾಸ್ತವವಾಗಿ, ನಮ್ಮ ದೇಶದಲ್ಲಿ ಒಬ್ಬರಿಗೆ ಅನೇಕ ಹೆಸರುಗಳನ್ನು ನೀಡುವುದು ಪರಿಪಾಠವಾಗಿದೆ. ಆದರೆ ದಾಖಲೆಗಳಲ್ಲಿ ಒಂದು ಹೆಸರನ್ನು ನಮೂದಿಸಲಾಗುತ್ತದೆ. ಇದು ಕೆಲವೊಮ್ಮೆ ವ್ಯಕ್ತಿಯನ್ನು ಗುರುತಿಸುವುದಕ್ಕೆ ಗೊಂದಲ ಉಂಟು ಮಾಡುತ್ತದೆ ಎಂದು ನ್ಯಾ.ಎನ್.ಎಸ್.ಸಂಜಯ್ ಗೌಡ ಅಭಿಪ್ರಾಯಪಟ್ಟಿದ್ದಾರೆ.