ಮನೆ ಕಾನೂನು ಕೆಳ ದರ್ಜೆ ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟ ದರ ನಿಗದಿಗೆ ಕೋರಿಕೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ...

ಕೆಳ ದರ್ಜೆ ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟ ದರ ನಿಗದಿಗೆ ಕೋರಿಕೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

0

ಪ್ರತಿ ದರ್ಜೆಯ ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟ ದರ ನಿಗದಿಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

Join Our Whatsapp Group

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿ ಗಣಿ ಗುತ್ತಿಗೆ ಹೊಂದಿರುವ ಬಿಕೆಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೆಸರ್ಸ್ ನದೀಮ್ ಮಿನರಲ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ವಿ ಶ್ರೀಶಾನಂದ ಅವರ ರಜಾಕಾಲೀನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಕೇಂದ್ರ ಗಣಿ ಸಚಿವಾಲಯ, ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೈಗಾರಿಕಾ ಇಲಾಖೆ, ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌, ಪ್ರಾದೇಶಿಕ ಗಣಿ ನಿಯಂತ್ರಕರಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು 2025ರ ಜನವರಿ 9ಕ್ಕೆ ಮುಂದೂಡಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದಿಸಿದರು.

ಕೆಳ ದರ್ಜೆಯ (Fe ಶೇ.35) ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟ ದರ ನಿಗದಿಪಡಿಸಲಾಗಿಲ್ಲ. ಇದರಿಂದ ಆರ್ಥಿಕ ಅನಾನುಕೂಲತೆಗಳು ಉಂಟಾಗುತ್ತಿವೆ. ಈ ಸಂಬಂಧ ಮನವಿ ಸಲ್ಲಿಸಿದರೂ ಕ್ರಮ ಆಗಿಲ್ಲ. ಇದರಿಂದಾಗಿ ಉನ್ನತ ದರ್ಜೆಯ ಕಬ್ಬಿಣದ ಅದಿರಿನ ರಾಯಧನ ಪಾವತಿಸಬೇಕಾಗಿದೆ. ಇದು ಎಂಎಂಡಿಆರ್ ಕಾಯಿದೆ-1957ರ ಸೆಕ್ಷನ್ 9(2) ಮತ್ತು ಖನಿಜಗಳ ರಿಯಾಯಿತಿ (ಪರಮಾಣು, ಹೈಡ್ರೋಕಾರ್ಬನ್ ಎನರ್ಜಿ ಖನಿಜಗಳು ಹೊರತಾದ) ನಿಯಮಗಳು-2016ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಖನಿಜಗಳ ರಿಯಾಯಿತಿ (ಪರಮಾಣು, ಹೈಡ್ರೋಕಾರ್ಬನ್ ಎನರ್ಜಿ ಖನಿಜಗಳು ಹೊರತಾದ) ನಿಯಮಗಳು-2016ರ ಇದರ ನಿಯಮ 42ರಂತೆ ಪ್ರತಿ ದರ್ಜೆಯ ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟದ ದರ ನಿಗದಿಪಡಿಸಬೇಕು. ಅಲ್ಲದೆ, ಕೇಂದ್ರ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಮೆಟಲ್ ಸ್ಕ್ರ್ಯಾಪ್‌ ಟ್ರೇಡ್ ಕಾರ್ಪೋರೇಷನ್ ಲಿಮಿಟೆಡ್ (ಎಂಎಸ್‌ಟಿಎಸ್) ನಿಗದಿಪಡಿಸಿದ ವಾಸ್ತವಿಕ ಮಾರಾಟ ದರಗಳ ಆಧಾರದಲ್ಲಿ ರಾಯಧನ ಪಾವತಿಸಲು ಅನುಮತಿ ನೀಡುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.