ಮನೆ ಕಾನೂನು ಹೆಚ್‌.ಡಿ.ರೇವಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡುವಂತೆ ಹೈಕೋರ್ಟ್ ಆದೇಶ

ಹೆಚ್‌.ಡಿ.ರೇವಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡುವಂತೆ ಹೈಕೋರ್ಟ್ ಆದೇಶ

0

ಬೆಂಗಳೂರು: ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡುವಂತೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಶಾಸಕ ಹೆಚ್​ಡಿ ರೇವಣ್ಣ ಆಯ್ಕೆ ಅಸಿಂಧು ಕೋರಿ ವಕೀಲ ಜಿ.ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಇಂದು (ಅ.30) ವಿಚಾರಣೆ ನಡೆಸಿದ ಹೈಕೋರ್ಟ್, ಮತ್ತೆ ಸಮನ್ಸ್​ ಜಾರಿಗೆ ಆದೇಶಿಸಿದೆ. ಚುನಾವಣಾ ತಕರಾರು ಅರ್ಜಿಯ ನಿಯಮದಂತೆ ಮೊದಲಿಗೆ ಸಮನ್ಸ್ ಜಾರಿ ಮಾಡಬೇಕು. ಅದರಂತೆ ಹೈಕೋರ್ಟ್ ನ್ಯಾ.ಜ್ಯೋತಿ ಮೂಲಿಮನಿ ಅವರು ಪ್ರಕ್ರಿಯೆಯಂತೆ ಸಮನ್ಸ್​ ಜಾರಿಗೆ ಆದೇಶಿಸಿ ಮುಂದಿನ ವಿಚಾರಣೆ ನ.29ಕ್ಕೆ ನಿಗದಿಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌.ಡಿ.ರೇವಣ್ಣ ಅಕ್ರಮ ನಡೆಸಿ ಆಯ್ಕೆಯಾಗಿದ್ದಾರೆ. ಅವರ ಬೆಂಬಲಿಗರು ಮತದಾರರಿಗೆ ತಲಾ 2 ಕೋಳಿ ಮತ್ತು 2 ಸಾವಿರ ರೂ. ನಗದು ಹಂಚಿ ಮತ ಹಾಕಿಸಿಕೊಂಡಿದ್ದಾರೆ. ಇಂತಹ ಅಕ್ರಮ ನಡೆಸಿ ಗೆದ್ದಿರುವ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜಿ.ದೇವರಾಜೇಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಇದೇ ಅರ್ಜಿಗೆ ಸಂಬಂಧಿಸಿದಂತೆ ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿತ್ತು. ಆದ್ರೆ, ರೇವಣ್ಣ ಅವರಿಗೆ ಸಮನ್ಸ್ ಜಾರಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ಜಾರಿಗೆ ಮನವಿ ಮಾಡಿದ್ದರು.