ಮನೆ ಕಾನೂನು 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಗೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌...

5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಗೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ

0

ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ಅನುಮತಿಸಿದೆ. ಹೀಗಾಗಿ, ಪರೀಕ್ಷೆಯನ್ನು ನಡೆಸುವ ಕುರಿತು ಉಂಟಾಗಿದ್ದ ಅನಿಶ್ಚಿತತೆ ದೂರವಾಗಿದೆ.

ಕಳೆದ ವರ್ಷದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ಮಾರ್ಚ್‌ 6ರಂದು ರದ್ದುಪಡಿಸಿ ಏಕಸದಸ್ಯ ಪೀಠ ಮಾಡಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ರಾಜೇಶ್‌ ರೈ ಕೆ ಅವರ ನೇತೃತ್ವದ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿದೆ. ಹೀಗಾಗಿ, ಮಾರ್ಚ್‌ 11ರಿಂದ (ಸೋಮವಾರ) ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ.

ಸುಮಾರು ಒಂದೂವರೆ ತಾಸು ವಾದ ಆಲಿಸಿ, ಆನಂತರ ಒಂದೂವರೆ ತಾಸಿಗೂ ಅಧಿಕ ಕಾಲ ತಮ್ಮಲ್ಲಿಯೇ ಚರ್ಚೆ ನಡೆಸಿದ ಬಳಿಕ ಪೀಠದಲ್ಲಿ ಆಸೀನರಾದ ನ್ಯಾಯಮೂರ್ತಿಗಳು ಸಂಜೆ 7ಗಳ ವೇಳೆಗೆ “ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ ಮಾರ್ಚ್‌ 6ರಂದು ಏಕಸದಸ್ಯ ಪೀಠ ಮಾಡಿರುವ ಆದೇಶಕ್ಕೆ ಮೇಲ್ಮನವಿಗಳ ಅಂತಿಮ ಇತ್ಯರ್ಥಕ್ಕೆ ಒಳಪಟ್ಟು ತಡೆಯಾಜ್ಞೆ ವಿಧಿಸಲಾಗಿದೆ” ಎಂದು ಆದೇಶಿಸಿದರು.

ಇದಕ್ಕೂ ಮುನ್ನ, ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ಅವರು “ಸೋಮವಾರ ಮಧ್ಯಾಹ್ನ 2.30ಕ್ಕೆ 5, 8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಆರಂಭವಾಗಲಿವೆ. 42,255 ಸರ್ಕಾರಿ ಶಾಲೆಗಳು, 2,656 ಅನುದಾನಿತ ಶಾಲೆಗಳು ಸೇರಿ ಒಟ್ಟಾರೆ 53,680 ಶಾಲೆಗಳಿವೆ. ಅನುದಾನರಹಿತ ಖಾಸಗಿ ಶಾಲೆಗಳನ್ನು ಪ್ರತಿವಾದಿಯಾಗಿರುವ ರುಪ್ಸಾ ಪ್ರತಿನಿಧಿಸುತ್ತಿದೆ. ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್‌ಮೆಂಟ್‌ ಒಕ್ಕೂಟ (ರುಪ್ಸಾ) ಹೇಳುವಂತೆ ಮಕ್ಕಳ ಹಿತ ಬಯಸುವುದಾದರೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಿತ್ತು. ಇಲ್ಲಿ ಅವರ ಹಿತಾಸಕ್ತಿ ಅಡಗಿದೆ. ಈಗ ಸರ್ಕಾರ ಏನು ಹೇಳುತ್ತದೆ ಅದನ್ನು ಅವರು ಪಾಲಿಸಬೇಕು. ಸರ್ಕಾರ ಪ್ರಶ್ನೆ ಪತ್ರಿಕೆ ರೂಪಿಸಿದರೆ ಅವರು ಪ್ರಶ್ನೆ ಪತ್ರಿಕೆ ರೂಪಿಸಲಾಗದು, ಬೇಕೆಂದದ್ದನ್ನು ಬೋಧಿಸಲಾಗದು. ಅಂತಿಮವಾಗಿ ನಾವು ಖಾಸಗಿ ಅನುದಾನರಹಿತ ಶಾಲೆಗಳು ಸರಿಯಾಗಿ ನಡೆಯದಿದ್ದರೆ ಅವರನ್ನು ತಕ್ಷಣ ಪತ್ತೆಹಚ್ಚಿ ಪಠ್ಯಕ್ರಮ ಪಾಲಿಸಲು ಸೂಚಿಸುತ್ತೇವೆ” ಎಂದು ವಿವರಿಸಿದರು.

ಮುಂದುವರೆದು, “ಅರ್ಜಿದಾರ ರುಪ್ಸಾ ಅತ್ಯಂತ ಕಡಿಮೆ ಶಾಲೆಗಳನ್ನು ಪ್ರತಿನಿಧಿಸುತ್ತಾರೆ. 5-8ನೇ ತರಗತಿಯ 46 ಸಾವಿರ ಶಾಲೆಗಳಿದ್ದು, ಪ್ರತಿ ಬ್ಯಾಚಿಗೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಒಟ್ಟಾರೆ 5, 8 ಮತ್ತು 9ನೇ ತರಗತಿಯ 28 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಖಾಸಗಿ ಅನುದಾನರಹಿತ ಶಾಲೆಯ ಮಕ್ಕಳು ಸುಮಾರು 8 ಲಕ್ಷ ಮಾತ್ರ,. ಈ ಪೈಕಿ ಒಬ್ಬೇ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರು ಹೈಕೋರ್ಟ್‌ ಮೆಟ್ಟಿಲೇರಿಲ್ಲ” ಎಂದರು.

“ನಮ್ಮ ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಪಬ್ಲಿಕ್‌ ಪರೀಕ್ಷೆ ನಡೆಸಲಾಗುತ್ತಿದೆ.  ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಅದನ್ನು ನಾವು ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ಖಾತರಿ ಮಾಡುವ ಉದ್ದೇಶ ಹೊಂದಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲಿ ಹೀಗೆ ಮಾಡಲಾಗುತ್ತಿದೆ. ಸರ್ಕಾರ ಪರೀಕ್ಷೆ ಪರಿಚಯಿಸುವಂತಿಲ್ಲ ಎಂದು ರುಪ್ಸಾ ಹೇಗೆ ಹೇಳುತ್ತದೆ. ರುಪ್ಸಾ ಪ್ರತಿನಿಧಿಸುವ ಖಾಸಗಿ ಅನುದಾನಿರಹಿತ ಶಾಲೆಗಳ 8 ಲಕ್ಷ ವಿದ್ಯಾರ್ಥಿಗಳು ಮಾತ್ರ ಇದ್ದು, ಉಳಿದ 5, 8 ಮತ್ತು 9ನೇ ತರಗತಿಯ 20 ಲಕ್ಷ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. 11ನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ” ಎಂದರು.

“ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಬೇಕಿದ್ದು, ಈ ಅನಿಶ್ಚಿತತೆ ನಮ್ಮ ಮಕ್ಕಳಿಗೆ ಎರವಾಗಿದೆ. ಹೀಗಾಗಿ, ಕಳೆದ ವರ್ಷದಂತೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ. ಅಂತಿಮವಾಗಿ ಶಿಕ್ಷಣ ಕಾಯಿದೆಯ ಸೆಕ್ಷನ್‌ 145 ಅನ್ನು ಪಾಲಿಸಬೇಕೆಂದರೆ ಪೀಠಕ್ಕೆ ಶರಣಾಗುತ್ತೇವೆ. ಇದನ್ನು ಮುಂದಿನ ವರ್ಷದಿಂದ ಪಾಲಿಸುತ್ತೇವೆ. 2023ರ ಡಿಸೆಂಬರ್‌ 13ರಂದು ಪಬ್ಲಿಕ್‌ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ತಡೆ ನೀಡಲಾಗಿಲ್ಲ. ಏಕಸದಸ್ಯ ಪೀಠದ ಮುಂದೆ ಆದೇಶ ಕಾಯ್ದಿರಿಸುವ ದಿನ ಪರೀಕ್ಷೆಗೆ ತಡೆ ನೀಡುವಂತೆ ಕೋರಲಾಗಿದೆ. ಇದನ್ನು ಪೀಠವು ಮೌಖಿಕವಾಗಿ ತಿರಸ್ಕರಿಸಿದೆ” ಎಂದರು.

ಮುಂದುವರಿದು “ಕಳೆದ ವರ್ಷವೂ ಏಕಸದಸ್ಯ ಪೀಠವು ಪರೀಕ್ಷೆ ರದ್ದುಪಡಿಸಿ ಆದೇಶ ಮಾಡಿತ್ತು. ಅರ್ಜಿದಾರ ರುಪ್ಸಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯವು ಪರೀಕ್ಷೆ ನಡೆಸಲು ಅನುಮತಿಸಿತ್ತು. ಅಂತಿಮವಾಗಿ ರುಪ್ಸಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿತ್ತು. ನಾವು ನಡೆಸುವ ಪಬ್ಲಿಕ್‌ ಪರೀಕ್ಷೆಯಲ್ಲಿ ಮಕ್ಕಳು ಪಡೆದ ಅಂಕಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಹಾಕುವುದಿಲ್ಲ. ವಿದ್ಯಾರ್ಥಿ ಮತ್ತು ಪೋಷಕರಿಗೆ ಮಾತ್ರ ಅದನ್ನು ತಿಳಿಸಿ, ಅವರ ಸುಧಾರಣೆಗೆ ಸಹಕರಿಸಲಾಗುತ್ತದೆ” ಎಂದು ಸಮರ್ಥಿಸಿದರು.

ರುಪ್ಸಾ ಪ್ರತಿನಿಧಿಸಿದ್ದ ವಕೀಲ ಕೆ ವಿ ಧನಂಜಯ ಅವರು “ಕಳೆದ ವರ್ಷ ಸರ್ಕಾರವು ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಕಾಯಿದೆ ಸೆಕ್ಷನ್‌ 16ರ ಅಡಿ 5 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇರಲಿದೆ ಎಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಆದರೆ, ಮಾರನೆಯ ದಿನ ಪರೀಕ್ಷೆ ನಿಗದಿಯಾಗಿತ್ತು. ಅಂದೂ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ, ತಡೆ ಕೋರಿದ್ದರು. ಆದರೆ, ವಿಭಾಗೀಯ ಪೀಠ ತಡೆ ನೀಡಿರಲಿಲ್ಲ. ಹೀಗಾಗಿ, ಪರೀಕ್ಷೆ ಮುಂದೂಡಲಾಗಿತ್ತು. ಆದರೆ, ನಾವು ಅಂತಿಮವಾಗಿ ಅರ್ಜಿಯ ಇತ್ಯರ್ಥ ಕೋರದಿದ್ದಕ್ಕೆ ವ್ಯಥೆ ಪಡುತ್ತಿದ್ದೇವೆ. ಸುಪ್ರೀಂ ಕೋರ್ಟ್‌ ಮೆರಿಟ್‌ ಮೇಲೆ ವಾದಿಸುವಂತೆ ಸೂಚಿಸಿತ್ತು. ಅದರಂತೆ ಹೈಕೋರ್ಟ್‌ನಲ್ಲಿ ಸರ್ಕಾರ ಹಲವು ಬಾರಿ ವಿಚಾರಣೆ ಮುಂದೂಡಿಕೆ ಕೋರಿ, ಕೊನೆಗೆ ಮೇಲ್ಮನವಿ ಹಿಂಪಡೆದಿತ್ತು” ಎಂದು ನೆನಪಿಸಿದರು.

“(ಪರೀಕ್ಷೆ ರದ್ದುಪಡಿಸಿದರೆ) ಪೋಷಕರ ಸ್ಥಿತಿ ಏನಾಗಬಾರದು ಎಂದು ಪೀಠ ಕೇಳಿದೆ. ಕಳೆದ ವರ್ಷವೂ ಕೆಲವು ಆತ್ಮಹತ್ಯೆಗಳಾಗಿದ್ದವು. ಶಿಕ್ಷಣ ಕಾಯಿದೆ ಅಡಿ ಸರ್ಕಾರ ನಡೆದುಕೊಂಡಿದೆ ಎಂದು ಅವರಿಗೆ ರಕ್ಷಣೆ ಇರಲಿದೆ. ಏಕಸದಸ್ಯ ಪೀಠವು ಸರ್ಕಾರ ಪರೀಕ್ಷೆ ನಡೆಸಲಾಗದು ಎನ್ನುತ್ತದೆ. ವಿಭಾಗೀಯ ಪೀಠ ಅರ್ಜಿಯು ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎನ್ನುತ್ತದೆ. ಸರ್ಕಾರ ಪರೀಕ್ಷೆ ನಡೆಸುತ್ತದೆ. ಆತ್ಮಹತ್ಯೆ ನಡೆಯುತ್ತವೆ. ನಿಸ್ಸಹಾಯಕ ಪೋಷಕರು ಏನು ಮಾಡುತ್ತಾರೆ? ಅಂತಿಮವಾಗಿ ಸರ್ಕಾರ ಫಲಾಯನಗೈಯ್ಯುತ್ತದೆ” ಎಂದು ವಾದಿಸಿದರು.

“ಯಾವುದೇ ನ್ಯಾಯಮೂರ್ತಿಯು ಪಬ್ಲಿಕ್‌ ಪರೀಕ್ಷೆ ರದ್ದು ಮಾಡುವುದಿಲ್ಲ. ಪ್ರತಿಯೊಬ್ಬ ನ್ಯಾಯಮೂರ್ತಿಗೆ ಮಕ್ಕಳ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಇಲ್ಲಿ (ನಮ್ಮ) ಹಿತಾಸಕ್ತಿ ಅಡಗಿದೆ ಎಂದು ಹೇಳಲಾಗುತ್ತಿದೆ. ಯಾವ ಹಿತಾಸಕ್ತಿ ಅಡಗಿದೆ? ಇದು ಭ್ರಷ್ಟಾಚಾರಕ್ಕೆ ನಾಂದಿ ಎಂದು ಹೇಳಲಾಗುತ್ತಿದೆ. ಆದರೆ, ಆರ್‌ಟಿಇ ಅಡಿ ಈ ಪರೀಕ್ಷೆಗಳಿಗೆ ಎಷ್ಟು ವೆಚ್ಚ ಮಾಡುತ್ತಿದ್ದಾರೆ ಎಂದು ಸರ್ಕಾರ ಹೇಳುವುದಿಲ್ಲ. ಸೋಮವಾರ ಪರೀಕ್ಷೆ ನಡೆಯದಿದ್ದರೆ ಆಕಾಶ ಕಳಚಿ ಬೀಳುವುದಿಲ್ಲ. ಯಾರೇ ಸತ್ತರು ಕಾಯಿದೆ ಅಡಿ ಸರ್ಕಾರಕ್ಕೆ ರಕ್ಷಣೆ ಇದೆ. ಪರೀಕ್ಷೆಯು ಕಾಯಿದೆ ವ್ಯಾಪ್ತಿಗೆ ಒಳಪಟ್ಟಿದೆ ಅಥವಾ ಇಲ್ಲ ಎಂಬುದನ್ನು ನ್ಯಾಯಾಲಯ ಹೇಳಬೇಕು. ಪರೀಕ್ಷೆಗೆ ಮೂರು ದಿನ ಇರುವಾಗ ಅದನ್ನು ರದ್ದು ಮಾಡುವಾಗ ನ್ಯಾಯಮೂರ್ತಿಗಳಿಗೂ ಕಳಕಳಿ ಇರುತ್ತದೆ. ಹೀಗಾಗಿ, ವಿಸ್ತೃತವಾಗಿ ಆಲಿಸಿ, ಆದೇಶ ಮಾಡಿದ ಬಳಿಕ ಸರ್ಕಾರ ಪರೀಕ್ಷೆ ನಡೆಸಲಿ. ಈಗ ಮಧ್ಯಂತರ ತಡೆ ಪಡೆದು ಪರೀಕ್ಷೆ ನಡೆಸುವುದು ಬೇಡ” ಎಂದರು.

ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್‌ 22ರ ಅಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯನ್ನು ಸಕ್ಷಮ ಪ್ರಾಧಿಕಾರವನ್ನಾಗಿಸಲಾಗಿದೆ ಎಂದು ಹೊರಡಿಸಿರುವ ಅಧಿಸೂಚನೆ ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯಿದೆ 1966ರ ಸೆಕ್ಷನ್‌ 15ರ ಅಡಿ ಇತರೆ ಪರೀಕ್ಷೆಗಳನ್ನು ನಡೆಸಲು ಅವಕಾಶವಿದ್ದು, 2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ಮತ್ತು11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ಅನುಮತಿಸಿದೆ. ಈ ಮೂಲಕ ಅವರು ಶಿಕ್ಷಣ ಸ್ಕೀಮ್‌ ಸೃಷ್ಟಿಸಿದ್ದಾರೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ಇದನ್ನು ನಾವು ಪ್ರಶ್ನಿಸಿದ್ದೇವೆ” ಎಂದರು.

ಆಗ ಪೀಠವು ಧನಂಜಯ ಅವರನ್ನು ಕುರಿತು “2023ರ ಅಕ್ಟೋಬರ್‌ 9ರಂದು ಶಿಕ್ಷಣ ಕಾಯಿದೆ ಸೆಕ್ಷನ್‌ 22ರ ಉಪಸೆಕ್ಷನ್‌ 2ರ ಅನ್ವಯ ಸರ್ಕಾರ ನಿಯಮ ರೂಪಿಸಬಹುದು ಎಂಬುದು ಸರ್ಕಾರದ ವಾದ. ಆದರೆ, ಏಕಸದಸ್ಯ ಪೀಠವು ನೋಟಿಫಿಕೇಶನ್‌ ಅನ್ನು ಶಿಕ್ಷಣ ಕಾಯಿದೆ ಸೆಕ್ಷನ್‌ 7ರ ಅಡಿ ಹೊರಡಿಸಲಾಗಿದೆ ಎಂದು ಹೇಳಿದೆ. ಈ ವಿಚಾರದಲ್ಲಿ ನಿಮ್ಮ ವಾದ ಏನು?” ಎಂದು ಕೇಳಿತು.

ಇದಕ್ಕೆ ಧನಂಜಯ ಅವರು “ಸಂಕ್ಷಿಪ್ತವಾಗಿ ವಾದಿಸಲಾಗದು. ಅದನ್ನು ವಿಸ್ತೃವಾಗಿ ಮಂಡಿಸಬೇಕಿದೆ. ಹೀಗಾಗಿ, 4 ತಾಸು ನೀಡಿದರೆ ನಾನು ವಾದಿಸುತ್ತೇನೆ. ಒಂದೊಮ್ಮೆ ನೀವು ಮಧ್ಯಂತರ ಆದೇಶದ ಮೂಲಕ ಸರ್ಕಾರ ಪರೀಕ್ಷೆ ನಡೆಸಲು ಅನುಮತಿಸಿದರೆ ಆತ್ಮಹತ್ಯೆಗಳಾಗುತ್ತವೆ. ಮೆರಿಟ್‌ ಮೇಲೆ ವಾದ ಆಲಿಸಿ, ನಮಗೆ ನಾಲ್ಕು ತಾಸು ನೀಡಿ” ಎಂದು ಕೋರಿದರು.

ಆಗ ಎಎಜಿ ವಿಕ್ರಮ್‌ ಅವರು “ನಾಟಕ ಮಾಡಬೇಡಿ. ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ” ಎಂದು ತಡೆಯೊಡ್ಡಿದರು.

ಸಮಯ ನಿಗದಿ ಕುರಿತಾದ ಧನಂಜಯ ಅವರ ಬೇಡಿಕೆಗೆ ಗರಂ ಆದ ಪೀಠವು “ವಾದ ಮಂಡಿಸಲು ನಾಲ್ಕು ತಾಸು ಕೇಳಿದರೆ ಹೇಗೆ? ದಿನಕ್ಕೆ ಇರುವುದು 24 ತಾಸು ಮಾತ್ರ. ನಿಮಗೆ 4 ತಾಸು ನೀಡಿದರೆ ಉಳಿದ 20 ತಾಸನ್ನು ವಿಭಜಿಸಿ, ಉಳಿದ ಕೆಲಸ ಮಾಡುವುದು ಹೇಗೆ? ವಾದ ಮಂಡಿಸಲು ಇಂತಿಷ್ಟೇ ಸಮಯ ನೀಡಬೇಕು ಎಂಬ ಯಾವುದೇ ನಿಯಮ, ಮಾರ್ಗಸೂಚಿ ಇಲ್ಲ” ಎಂದರು. ಅಂತಿಮವಾಗಿ ಪೀಠವು ಸುಮಾರು ಒಂದೂವರೆ ತಾಸು ಚರ್ಚಿಸಿ, ಬಳಿಕ ಮಧ್ಯಂತರ ಆದೇಶ ಮಾಡಿತು.

ಇದಕ್ಕೂ ಮುನ್ನ, ಬುಧವಾರ ನ್ಯಾಯಮೂರ್ತಿ ರವಿ ವಿ ಹೊಸಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ಪಬ್ಲಿಕ್‌ ಪರೀಕ್ಷೆಗೆ ಆಕ್ಷೇಪಿಸಿ ರುಪ್ಸಾ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿತ್ತು. ಸೋಮವಾರ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತವಾದ ರಾಜ್ಯ ಸರ್ಕಾರವು ಇಂದು ಬೆಳಿಗ್ಗೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಆಲಿಸುವಂತೆ ಕೋರಿತ್ತು. ಇದನ್ನು ಮನ್ನಿಸಿದ ಸಿಜೆ ಅವರ ಪೀಠವು ಅರ್ಜಿಯನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಿತ್ತು.