“ಯಾವುದೇ ವ್ಯಕ್ತಿಯ ಮೇಲೆ ಕಣ್ಗಾವಲು ಇಡುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ” ಎಂದು ಮೌಖಿಕವಾಗಿ ಹೇಳಿರುವ ಕರ್ನಾಟಕ ಹೈಕೋರ್ಟ್ ರೌಡಿ ಶೀಟರ್ ಸೈಲೆಂಟ್ ಸುನೀಲ್ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧದ ಪ್ರಕರಣವನ್ನು ಈಚೆಗೆ ರದ್ದುಪಡಿಸಿದೆ.
ಕೇಂದ್ರೀಯ ಅಪರಾಧ ದಳದ ಡಿಸಿಪಿ ಶ್ರೀನಿವಾಸ್ ಗೌಡ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪಿ ಹರೀಶ್ ಅವರು ಸಲ್ಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಹೆಬ್ಬಾಳದ ಗೋದ್ರೇಜ್ ವುಡ್ಸ್‌ಮನ್ ಎಸ್ಟೇಟ್ ನಿವಾಸಿಯಾಗಿರುವ ಸೈಲೆಂಟ್ ಸುನೀಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಅರ್ಜಿಯನ್ನು ಪುರಸ್ಕಲಾಗಿದ್ದು, ಪ್ರಕರಣ ರದ್ದುಪಡಿಸಲಾಗಿದೆ” ರಜಾಕಾಲದ ಬಳಿಕ ವಿಸ್ತೃತ ಆದೇಶ ಲಭ್ಯವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರ ಸುನೀಲ್ ಪರ ವಕೀಲರು, “2022ರಲ್ಲಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. 2017ರಲ್ಲಿ ದಾಖಲಾಗಿರುವ ಪ್ರಕರಣವನ್ನು ಹೈಕೋರ್ಟ ತಡೆದಿದೆ. ಅದರಲ್ಲಿ ಕೋಕಾ ಆರೋಪ ವಜಾ ಆಗಿದೆ. ಸದ್ಯ ಈ ಎರಡೂ ಪ್ರಕರಣ ಮಾತ್ರ ಈಗ ಬಾಕಿ ಇವೆ. ರೌಡಿ ಶೀಟರ್ ತೆರೆಯುವ ನಿಟ್ಟಿನಲ್ಲಿ ಸೈಲೆಂಟ್ ಸುನೀಲ್ ವಿಚಾರದಲ್ಲಿ ಹೈಕೋರ್ಟ್ ರೂಪಿಸಿರುವ ಒಂದೇ ಒಂದು ಮಾರ್ಗಸೂಚಿಯನ್ನೂ ಪಾಲಿಸಲಾಗಿಲ್ಲ. ಸೈಲೆಂಟ್ ಸುನೀಲ್ ಹೆಸರು ರೌಡಿ ಶೀಟರ್ ಪಟ್ಟಿಯಲ್ಲಿದ್ದು, ಇದುವರೆಗೂ ಅವರಿಗೆ ಒಂದೇ ಒಂದು ನೋಟಿಸ್ ನೀಡಿಲ್ಲ. ಪೊಲೀಸರು ಪದೇಪದೇ ಪೊಲೀಸ್ ಠಾಣೆಗೆ ಕರೆಯುತ್ತಿದ್ದಾರೆ. ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅಫಿಡವಿಟ್ ಸಲ್ಲಿಸಲು ಸುನೀಲ್ ಸಿದ್ಧರಿದ್ದಾರೆ. 2019 ರಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಈಗ ಉದ್ಯಮ ನಡೆಸುತ್ತಿದ್ದಾರೆ” ಎಂದರು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್ ಅವರು “ಅರ್ಜಿದಾರರ ಪರ ವಕೀಲರು ಸಲ್ಲಿಸಿರುವ ಫೋಟೊಗಳನ್ನು ನೋಡಿದರೆ ಎಲ್ಲವೂ ತಿಳಿಯಲಿದೆ. ಕಣ್ಗಾವಲು ಇಡುವ ವಿಚಾರದಲ್ಲಿ ವಿನಾಯಿತಿ ಇದೆ. ಅರ್ಜಿದಾರರು ಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು” ಎಂದರು.
ಇದನ್ನು ಆಲಿಸಿದ ಪೀಠವು “ಸೈಲೆಂಟ್ ಆಗಿದ್ದರೆ ಇದೆಲ್ಲವೂ ಆಗುವುದಿಲ್ಲ. ಏನು ಮಾಡ್ತಾ ಇದೀರಿ? ಸಮಾಜ ಸೇವೆಯೋ? ಯಾವುದೇ ವ್ಯಕ್ತಿಯ ಮೇಲೆ ಕಣ್ಗಾವಲು ಇಡುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕೆಲವರ ವಿಚಾರದಲ್ಲಿ ವಿನಾಯಿತಿ ಎಂಬುದು ನಿಜವಾದರೂ ಕಣ್ಗಾವಲು ಇಡುವುದು ಕಾನೂನಿನ ವ್ಯಾಪ್ತಿಯಲ್ಲಿರಬೇಕು. ಹಾಗೆಂದು ಆತನ ಬದುಕಿನಲ್ಲಿ ಏನಾಗುತ್ತದೆ ಎಂದು ನಿಗಾ ಇಡಲಾಗದು. ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಕಾಪಾಡಲು ನಿಗಾ ಇಡುವುದು ಸರಿ. ಆದರೆ, ಎಲ್ಲಾ ಪ್ರಕರಣಗಳಲ್ಲೂ ಅಲ್ಲ. ರೌಡಿ ಪರೇಡ್ ವಿಚಾರ ಬೇರೆಯಾಗಿದ್ದು, ಅದರ ಮೇಲೆ ಅಭಿಪ್ರಾಯ ನೀಡುವುದಿಲ್ಲ” ಎಂದು ಪೀಠ ಹೇಳಿತು.
ಪ್ರಕರಣದ ಹಿನ್ನೆಲೆ: ಸೈಲೆಂಟ್ ಸುನೀಲ್ ಅಂತ್ಯ ಸಂಸ್ಕಾರವೊಂದರ ಮೆರವಣಿಗೆಯಲ್ಲಿದ್ದಾಗ ಪೊಲೀಸರು ಆತನ ಕೈಹಿಡಿದು ಎಳೆದಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ, ಯಾವ ವಾರೆಂಟ್ ಮೇಲೆ, ಯಾವ ಸಂದರ್ಭದಲ್ಲಿ ಸೈಲೆಂಟ್ ಸುನೀಲ್ ಪೊಲೀಸ್ ಠಾಣೆಗೆ ಬರಬೇಕು ಎಂಬ ವಿಚಾರ ತಿಳಿಸಿಲ್ಲ. ಈ ಸಂಬಂಧ ಬಿಎನ್‌ಎಸ್ ಸೆಕ್ಷನ್‌ಗಳಾದ 132 ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಸೆಕ್ಷನ್ 3(5), ಕ್ರಿಮಿನಲ್ ಹೊಣೆಗಾರಿಕೆ ಮತ್ತು ಸೆಕ್ಷನ್ 352ರ (ಉದ್ದೇಶಪೂರ್ವಕವಾಗಿ ಅವಮಾನಿಸುವ ಆರೋಪ) ಮೇಲೆ ಸೈಲೆಂಟ್ ಸುನೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.