ಮನೆ ಕಾನೂನು ತೃತೀಯ ಲಿಂಗಿಗಳ ಮೀಸಲಾತಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಣೆ

ತೃತೀಯ ಲಿಂಗಿಗಳ ಮೀಸಲಾತಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಣೆ

0

ಬೆಂಗಳೂರು: ರಾಜ್ಯದಲ್ಲಿನ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳಿಗೆ ಇರುವ ಮೀಸಲಾತಿಯಂತೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ ಎಸ್‌ ಎಲ್‌ ಯು) ಶುಲ್ಕ ರಹಿತವಾಗಿ ಶೇ.0.5ರಷ್ಟು ಮಧ್ಯಂತರ ಮೀಸಲಾತಿ ನೀಡಬೇಕು ಎಂದು ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ಸೋಮವಾರ ನಿರಾಕರಿಸಿತು.

Join Our Whatsapp Group

ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ಕೆ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಟಿ.ಎಂ.ನದಾಫ್ ಅವರಿದ್ದ ನ್ಯಾಯಪೀಠ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮಾ.6ಕ್ಕೆ ನಿಗದಿಪಡಿಸಿದೆ.

ಅಲ್ಲದೇ ಅಲ್ಲಿಯವರೆಗೂ ಏಕ ಸದಸ್ಯ ಪೀಠದ ಆದೇಶವನ್ನು ಪಾಲಿಸದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸದಂತೆ ಪೀಠ ಮೌಖಿಕವಾಗಿ ಏಕ ಸದಸ್ಯಪೀಠದಲ್ಲಿ ಅರ್ಜಿದಾರರಾಗಿದ್ದ ತೃತೀಯ ಲಿಂಗಿಯಾಗಿರುವ ಮುಗಿಲ್ ಅನ್ಬು ವಸಂತ ಅವರಿಗೆ ಸೂಚಿಸಿದೆ.

ಏಕಸದಸ್ಯ ಪೀಠದ ಆದೇಶವೇನು?: ಮುಂಬರುವ ಶೈಕ್ಷಣಿಕ ವರ್ಷದಿಂದ 3 ವರ್ಷದ ಎಲ್‌ಎಲ್‌ಬಿಗೆ ಇತರ ತೃತೀಯ ಲಿಂಗಿ ವಿದ್ಯಾರ್ಥಿಗಳು ಇಲ್ಲದಿದ್ದಲ್ಲಿ ಅರ್ಜಿದಾರರಿಗೆ ಶುಲ್ಕರಹಿತವಾಗಿ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದೆ. ಶುಲ್ಕ ಭರಿಸುವುದಕ್ಕಾಗಿ ರಾಜ್ಯ ಇಲ್ಲವೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬಹುದಾಗಿದೆ ಎಂದು ಪೀಠ ತಿಳಿಸಿದೆ.

ತಾರತಮ್ಯಕ್ಕೆ ಹೈಕೋರ್ಟ್ ಬೇಸರ: ಅಲ್ಲದೇ ಯುನಿವರ್ಸಿಟಿ ತೃತೀಯ ಲಿಂಗಿಗಳ ಪ್ರವೇಶ ಮತ್ತು ಅವರಿಗೆ ಆರ್ಥಿಕ ನೆರವು ನೀತಿಗಳು ತಾರತಮ್ಯದಿಂದ ಕೂಡಿದ್ದು, ಆ ಮೂಲಕ ಈ ವರ್ಗದವರು ಕಾನೂನು ಪದವಿಗಳನ್ನು ಪಡೆಯುವ ಅವಕಾಶದಿಂದ ವಂಚಿತರಾಗುವಂತೆ ಮಾಡಿವೆ ಎಂದು ಪೀಠ ಬೇಸರ ವ್ಯಕ್ತಪಡಿಸಿತ್ತು.

ಪ್ರಕರಣವೇನು?: ಮುಗಿಲ್ ಅನ್ಬು ವಸಂತ ಅವರು ಮಹಾತ್ಮಗಾಂಧಿ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಮತ್ತು ಟಾಟಾ ಇನ್‌ಸ್ಟಿಟ್ಯೂಟ್‌ನ ಸೋಷಿಯಲ್ ಸೈನ್ಸ್ ಡೆವಲಪ್‌ಮೆಂಟ್ ಸ್ಟಡೀಸ್ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಅಲ್ಲದೇ ಲಿಂಗ ಪರಿವರ್ತನೆಯಾದ ಬಳಿಕ ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾವಣೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಬದಲಾಯಿಸಿಕೊಂಡು ಪ್ರಮಾಣಪತ್ರ ಪಡೆದುಕೊಂಡಿದ್ದರು.

2023ರ ಜನವರಿಯಲ್ಲಿ ಎನ್‌ಎಲ್‌ಎಸ್‌ಐಯುನ ಮೂರು ವರ್ಷದ ಎಲ್‌ಎಲ್‌ಬಿ ಪದವಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರವೇಶ ಪರೀಕ್ಷೆಯಲ್ಲಿ ಶೇ 96.25 ಅಂಕಗಳಿಸಿದ್ದರೂ ಸೀಟು ಸಿಕ್ಕಿರಲಿಲ್ಲ. ಬಳಿಕ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಕರ್ನಾಟಕ ರಾಜ್ಯ ತೃತೀಯ ಲಿಂಗಿಗಳ ನೀತಿಯ ಅಡಿಯಲ್ಲಿ ಸೀಟು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸೀಟು ನೀಡುವಂತೆ ಹೈಕೋರ್ಟ್ ಸೂಚನೆ ನೀಡಿ ಆದೇಶಿಸಿದೆ. ಇದನ್ನು ಪ್ರಶ್ನಿಸಿ ಯೂನಿರ್ವಸಿಟಿ ಮೇಲ್ಮನವಿ ಸಲ್ಲಿಸಿದೆ.