ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವು ನೇಮಿಸಿರುವ ಏಕಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರನ್ನು ಕೇಂದ್ರ ಸರ್ಕಾರವು ಮೂರು ವರ್ಷಗಳ ಕಾಲ ಸರ್ಕಾರದ ಎಲ್ಲಾ ನೇಮಕಾತಿಗಳಿಂದ ಡಿಬಾರ್ ಮಾಡಿ ಹೊರಡಿಸಿರುವ ಆಕ್ಷೇಪಾರ್ಹ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೇ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2024ರ ನವೆಂಬರ್ 7ರಂದು ಹೊರಡಿಸಿರುವ ಡಿಬಾರ್ ಮಾಡಿರುವ ಆದೇಶವನ್ನು ಪ್ರಶ್ನಿಸಿ ನ್ಯಾ. ದೇಸಾಯಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠವು ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠವು, “ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಎಸ್ಟಾಬ್ಲಿಷ್ಮೆಂಟ್ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ವಿಧಿಸಲಾಗಿದೆ” ಎಂದು ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ನ್ಯಾ. ದೇಸಾಯಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ನ್ಯಾ. ದೇಸಾಯಿ ಅವರು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು,ಹೈದಾರಾಬಾದ್ ಪೀಠದ ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ರಾಷ್ಟ್ರಪತಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಆಗಸ್ಟ್ 14ರಂದು ಪತ್ರ ಬರೆದಿದ್ದಾರೆ. ಇದರಲ್ಲಿ ಮುಡಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿದ್ದು, ಆರು ತಿಂಗಳಲ್ಲಿ ಜವಾಬ್ದಾರಿ ಮುಗಿಯಲಿದೆ. ಹೀಗಾಗಿ, ಸದ್ಯಕ್ಕೆ ಕೇಂದ್ರ ಸರ್ಕಾರದ ನೇಮಕಾತಿಯನ್ನು ನಿರಾಕರಿಸುವುದು ಅನಿವಾರ್ಯವಾಗಿದೆ” ಎಂದು ತಿಳಿಸಿದ್ದರು.
ಅಲ್ಲದೇ, “ನೇಮಕಾತಿ ಪ್ರಸ್ತಾವವನ್ನು ಸಂಪುಟ ನೇಮಕಾತಿ ಸಮಿತಿಗೆ ಕಳುಹಿಸುವುದಕ್ಕೂ ಮುನ್ನ ಆಯ್ಕೆಯಾಗಿರುವವರ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಇದಾದ ಬಳಿಕ 30 ದಿನಗಳಲ್ಲಿ ನೇಮಕವಾದವರು ಕರ್ತವ್ಯಕ್ಕೆ ಹಾಜರಾಗದಿದ್ದರೆ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಬೇಕು. ಅದಾಗ್ಯೂ ಅವರು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಡಿಬಾರ್ ಮಾಡಬಹುದು. ಇಲ್ಲಿ, ನ್ಯಾ. ದೇಸಾಯಿ ಅವರಿಗೆ ಆಯ್ಕೆಯಾದ ಬಳಿಕ ಅವರ ಒಪ್ಪಿಗೆ ಪಡೆದಿಲ್ಲ, ಡಿಬಾರ್ ಮಾಡುವುದಕ್ಕೂ ಮುನ್ನ ನೋಟಿಸ್ ಸಹ ನೀಡಿಲ್ಲ. ನ್ಯಾ. ದೇಸಾಯಿ ಅವರನ್ನು ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡುವುದರಿಂದ ಡಿಬಾರ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿದೆ. ಹೀಗಾಗಿ, ಡಿಬಾರ್ ಮಾಡಿರುವ ಆದೇಶಕ್ಕೆ ತಡೆಯಾಜ್ಞೆ ವಿಧಿಸಬೇಕು” ಎಂದು ಮನವಿ ಮಾಡಿದರು.
“ನ್ಯಾ.ಪಿ ಎನ್ ದೇಸಾಯಿ ಅವರು ಸಿಎಟಿಗೆ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾದ ಆರು ತಿಂಗಳು ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ಈ ಮಧ್ಯೆ, ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವು ಪಿ ಎನ್ ದೇಸಾಯಿ ಅವರ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಆಯೋಗ ರಚಿಸಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರವು ನ್ಯಾ. ದೇಸಾಯಿ ಅವರಿಗೆ ಸಿಎಟಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ನೇಮಕಾತಿ ಪತ್ರ ಕಳುಹಿಸಿತ್ತು. ಮುಡಾ ಹಗರಣದ ತನಿಖೆಗೆ ಆರು ತಿಂಗಳ ಗಡುವು ನೀಡಿದ್ದು, ಅದು ಮುಗಿದ ಬಳಿಕ ಸಿಎಟಿ ಜವಾಬ್ದಾರಿ ಪಡೆದುಕೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಕೇಂದ್ರ ಸರ್ಕಾರವು ನ್ಯಾ. ದೇಸಾಯಿ ಅವರನ್ನು ಮೂರು ವರ್ಷಗಳಿಗೆ ಡಿಬಾರ್ ಮಾಡಿದೆ” ಎಂದರು.
“ನ್ಯಾ. ದೇಸಾಯಿ ಅವರನ್ನು ಡಿಬಾರ್ ಮಾಡುವುದಕ್ಕೂ ಮುನ್ನ ಅವರ ವಾದ ಆಲಿಸಿಲ್ಲ. ಆದರೆ, ಕೇಂದ್ರ ಸರ್ಕಾರದ ಆದೇಶದಲ್ಲಿ ವೈಯಕ್ತಿಕ ಕಾರಣಕ್ಕೆ ಹೈದರಾಬಾದ್ ಸಿಎಟಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಆಕ್ಷೇಪಾರ್ಹ ಆದೇಶದಲ್ಲಿ ವಿವರಿಸಲಾಗಿದೆ. ಇಲ್ಲಿ ಯಾವುದೇ ವೈಯಕ್ತಿಕ ಕಾರಣಗಳು ಇಲ್ಲ. ಮುಡಾ ಹಗರಣದ ತನಿಖಾ ಜವಾಬ್ದಾರಿ ಮುಗಿಸಿ, ಸಿಎಟಿ ನೇಮಕಾತಿಯನ್ನು ಒಪ್ಪಿಕೊಳ್ಳುತ್ತೇನೆ. ಅಲ್ಲಿಯವರೆಗೆ ನೇಮಕಾತಿ ಮುಂದೂಡುವಂತೆ ನ್ಯಾ. ದೇಸಾಯಿ ಅವರು ಪತ್ರ ಬರೆದಿದ್ದಾರೆ. ನ್ಯಾ. ದೇಸಾಯಿ ಅವರ ವಾದ ಆಲಿಸಲಾಗಿಲ್ಲ. ವೈಯಕ್ತಿಕ ಸಮಾಲೋಚನೆ ನಡೆಸದೇ ಡಿಬಾರ್ ಮಾಡಲಾಗಿದೆ” ಎಂದರು.
ನ್ಯಾ. ದೇಸಾಯಿ ಅವರು ತಮ್ಮ ಅರ್ಜಿಯಲ್ಲಿ ವ್ಯಕ್ತಪಡಿಸಿದ್ದ ಬದ್ಧತೆಯನ್ನು ಗೌರವಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನೇಮಕಾತಿ ರದ್ದುಪಡಿಸಿತ್ತು.
ಕೇಂದ್ರ ಸರ್ಕಾರವು ತನ್ನ ಆದೇಶದಲ್ಲಿ, “ಹಾಲಿ ಇರುವ ನಿಯಮಗಳ ಅನ್ವಯ ನ್ಯಾ. ದೇಸಾಯಿ ಅವರನ್ನು ಡಿಬಾರ್ ಮಾಡುವ ನಿರ್ಧಾರವನ್ನು ಸಂಪುಟದ ನೇಮಕಾತಿ ಸಮಿತಿಯು ಕೈಗೊಂಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ನ್ಯಾ. ದೇಸಾಯಿ ಅವರನ್ನು ಸರ್ಕಾರದ ಯಾವುದೇ ಸ್ವಾಯತ್ತ, ಶಾಸನಬದ್ಧ ಅಥವಾ ನಿಯಂತ್ರಣ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಲು 2024ರ ಅಕ್ಟೋಬರ್ 21ರಿಂದ ಪೂರ್ವಾನ್ವಯವಾಗುವಂತೆ ಡಿಬಾರ್ ಮಾಡಿ ಆದೇಶಿಸಲಾಗಿದೆ” ಎಂದಿದೆ.