ಕೊಪ್ಪಳ: ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್ ಮತ್ತು ಚಿಕನ್ಗುನ್ಯಾ ಪ್ರಕರಣಗಳು ಹೆಚ್ಚಾಗಿದ್ದು, ಗ್ರಾಮದ ಜನರು ಜ್ವರ, ಮೈ ಕೈ ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದಾರೆ.
ನೆರೆಬೆಂಚಿ ಗ್ರಾಮ ಮಾತ್ರವಲ್ಲ, ಅನೇಕ ಗ್ರಾಮಗಳಲ್ಲಿ ಚಿಕನ್ ಗುನ್ಯಾ ಆತಂಕ ಆರಂಭವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗಗಳು ಬೇಸಿಗೆಯಲ್ಲಿ ಬಂದಿವೆ. ರೋಗ ಬಂದು ಕಡಿಮೆಯಾಗದೆ ಇರುವುದು ಜನರ ಆತಂಕ ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ಕೊಪ್ಪಳ ಜಿಲ್ಲಾ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ.
ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ಜನರು ಕಳೆದ ಒಂದು ವಾರದಿಂದ ಜ್ವರ ಮತ್ತು ಮೈ ಕೈ ನೋವಿನಿಂದ ಬಳಲುತ್ತಿದ್ದಾರೆ. ಆರಂಭದಲ್ಲಿ ವೈರಲ್ ಫೀವರ್ ಅಂತ ತಿಳಿದು, ಜನರು ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದರು. ಆದರೆ ಜ್ವರ ಪೀಡಿತರ ಸಂಖ್ಯೆ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ದೀಡಿರನೆ ಹೆಚ್ಚಾಗಿದೆ. ಹೀಗಾಗಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೆಲವರ ರಕ್ತ ತಪಾಸಣೆ ನಡೆಸಿದಾಗ, ಓರ್ವನಲ್ಲಿ ಚಿಕನ್ಗುನ್ಯಾ ಪಾಸಿಟಿವ್ ಬಂದಿದೆ.
ನೆರೆಬೆಂಚಿ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಲು ಜ್ವರ ಪ್ರಕರಣಗಳು ಹೆಚ್ಚಾಗಲು ಸೊಳ್ಳೆಗಳು ಕಾರಣ ಎಂಬುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮೆಲೆರಿಯಾ, ಚಿಕನ್ಗುನ್ಯಾ, ಡೇಂಘಿ ಜ್ವರ ಹರಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನೆರೆಬೆಂಚಿ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಜನರಿಗೆ ತಿಳಿಸುತ್ತಿದ್ದಾರೆ. ನೀರನ್ನು ಸ್ವಚ್ಚವಾಗಿಟ್ಟುಕೊಳ್ಳಿ, ಸುತ್ತಮುತ್ತಲಿನ ಪರಿಸರವನ್ನು ಕೂಡ ಸ್ವಚ್ಚವಾಗಿಟ್ಟುಕೊಂಡು, ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಿ, ನೀರನ್ನು ಹೆಚ್ಚು ದಿನ ಸಂಗ್ರಹಿಸಿಡುವ ಬದಲು ಮೇಲಿಂದ ಮೇಲೆ ಬದಲಾಯಿಸಿ ಎಂಬುವುದು ಸೇರಿದಂತೆ ಅನೇಕ ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾರೆ. ಕೇವಲ ನೆರೆಬೆಂಚಿ ಗ್ರಾಮ ಮಾತ್ರವಲ್ಲ, ಸುತ್ತುಮುತ್ತಲಿನ ಗ್ರಾಮಗಳಲ್ಲಿನ ಜನರಿಗೂ ಕೂಡ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ.