ಮನೆ ಸುದ್ದಿ ಜಾಲ ಕರ್ನಾಟಕದಲ್ಲಿ ಮತದಾನಕ್ಕೆ ಹಿಂದೆಂದೂ ಕೈಗೊಳ್ಳದಷ್ಟು ಭಾರೀ ಭದ್ರತೆ.

ಕರ್ನಾಟಕದಲ್ಲಿ ಮತದಾನಕ್ಕೆ ಹಿಂದೆಂದೂ ಕೈಗೊಳ್ಳದಷ್ಟು ಭಾರೀ ಭದ್ರತೆ.

0

ಕರ್ನಾಟಕ ವಿಧಾನಸಭಾ ಚುನಾವಣೆ  (Karnataka Assembly Elections 2023) ನಾಳೆ ಒಂದು ದಿನವಷ್ಟೇ ಬಾಕಿ ಇದೆ. ಮೇ 10ರಂದು ಮತದಾನ ನಡೆಯಲಿದ್ದು, ಭಾರೀ ಪೊಲೀಸ್ ಭದ್ರತೆ (Police Security) ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar), ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಚುನಾವಣೆ ಭದ್ರತೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.

Join Our Whatsapp Group

ಭದ್ರತಾ ಕಾರ್ಯದಲ್ಲಿ 304 ಡಿವೈಎಸ್​ಪಿ, 991 ಪೊಲೀಸ್​ ಇನ್ಸ್​ಪೆಕ್ಟರ್​, 2,610 ಪಿಎಸ್​ಐ, 5,803 ಎಎಸ್​ಐ ಸೇರಿದಂತೆ 84,000 ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಇವರೊಂದಿಗೆ 8.5 ಸಾವಿರ ಹೋಂ ಗಾರ್ಡ್​​ಗಳನ್ನು, 650 ಸಿಆರ್​ಪಿಎಫ್ ತುಕಡಿ, ಕೆಎಸ್​ಆರ್​ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಗೋವಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಯಾವತ್ತು ನಿಯೋಜಿಸಿರಲಿಲ್ಲ, ಚುನಾವಣಾಧಿಕಾರಿಗಳ ಕೆಲವು ಮಾನದಂಡಗಳ ಪ್ರಕಾರ ನಿಯೋಜನೆ ಮಾಡಲಾಗಿದೆ ಎಂದರು.

ಸೂಕ್ಷ್ಮ ಮತಗಟ್ಟೆಗಳ ಮಾಹಿತಿ

ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ ಎಂದು ಹೇಳಿದ ಅಲೋಕ್ ಕುಮಾರ್, ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣ ಕಡೆ ಹೆಚ್ಚಿನ ನಿಗಾ ಇರಿಸಲಾಗಿದೆ. ಯಾವುದೇ ಅಹಿತಕರ ಘಟನೆ ಆಗಬಾರದೆಂದು ಐಪಿಎಸ್ ಅಧಿಕಾರಿಗಳ ಮೂಲಕ 5 ದಿನಗಳಿಂದ ನಿಗಾ ಇಡಲಾಗಿದೆ. 11,617 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಿದ್ದೇವೆ ಎಂದರು.

ಚುನಾವಣೆ ಘೋಷಣೆ ನಂತರ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಅಲ್ಲಲ್ಲಿ ಚೆಕ್​ಪೋಸ್ಟ್​ಗಳನ್ನು ಹಾಕಿ ತಪಾಸಣೆ ನಡೆಸಿ ಅಕ್ರಮವಾಗಿ ಅಥವಾ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ವಸ್ತುಗಳನ್ನು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈವರೆಗೆ ಒಟ್ಟು 230 ಕೋಟಿ ಮೌಲ್ಯದ ವಸ್ತುಗಳನ್ನು ಹಾಗೂ 105 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ. ಇಂದು ಮತ್ತು ನಾಳೆ ಸಹ ಹಣ ಸಾಗಾಟದ ಬಗ್ಗೆ ನಿಗಾ ಇಡಲಾಗಿದೆ ಎಂದು ಎಡಿಜಿಪಿ ಅಲೋಕ್​ ಕುಮಾರ್​ ಹೇಳಿದ್ದಾರೆ. ಈವರೆಗೆ 53,406 ವ್ಯಕ್ತಿಗಳ ವಿರುದ್ಧ ಬಾಂಡ್ ಓವರ್ ಮಾಡಲಾಗಿದೆ. ಭದ್ರತಾ ಪ್ರಕರಣ ಉಲ್ಲಂಘಿಸಿದ 115 ಪ್ರಕರಣ ದಾಖಲಿಸಲಾಗಿದೆ. 1.57 ಕೋಟಿ ಹಣ ಮುಟ್ಟುಗೋಲುಗೆ ಕ್ರಮ ಕೈಗೊಳ್ಳಲಾಗಿದೆ. 714 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಹಿಂದಿನ ಲೇಖನಸೋಮವಾರ ಸಂಜೆ 5 ರಿಂದ ಮದ್ಯ ಮಾರಾಟ ಬಂದ್‌
ಮುಂದಿನ ಲೇಖನಅಪ್ಪ ದಿನಾ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಾನೆ ಎಂದು ಪೊಲೀಸ್​ ಅಧಿಕಾರಿಗೆ ದೂರು ನೀಡಿದ ಬಾಲಕ.