ಮನೆ ಕಾನೂನು ಅದಾನಿ ವಿರುದ್ಧ ಹಿಂಡನ್’ಬರ್ಗ್ ವರದಿ: ಆಂಡರ್ಸನ್ ವಿರುದ್ಧ ತನಿಖೆಗೆ ಆದೇಶಿಸಲು ಕೋರಿ ಸುಪ್ರೀಂ ಕದತಟ್ಟಿದ ಶರ್ಮಾ

ಅದಾನಿ ವಿರುದ್ಧ ಹಿಂಡನ್’ಬರ್ಗ್ ವರದಿ: ಆಂಡರ್ಸನ್ ವಿರುದ್ಧ ತನಿಖೆಗೆ ಆದೇಶಿಸಲು ಕೋರಿ ಸುಪ್ರೀಂ ಕದತಟ್ಟಿದ ಶರ್ಮಾ

0

ಅದಾನಿ ಸಮೂಹದ ವಿರುದ್ಧ ಈಚೆಗೆ ಪ್ರಕಟಿಸಿರುವ ಸಂಶೋಧನಾ ವರದಿಗೆ ಸಂಬಂಧಿಸಿದಂತೆ ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್’ಬರ್ಗ್’ನ ಸಂಸ್ಥಾಪಕ ನೇಥನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅವರ ಸಹವರ್ತಿಗಳ ವಿರುದ್ಧ ಎಫ್’ಐಆರ್ ದಾಖಲಿಸಿ, ತನಿಖೆ ನಡೆಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಕೇಂದ್ರ ಗೃಹ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಗುರುವಾರ ಸುಪ್ರೀಂ ಕೋರ್ಟ್’ಗೆ ಅರ್ಜಿ ಸಲ್ಲಿಸಲಾಗಿದೆ.

ಅದಾನಿ ಸಮೂಹಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ‘ಹೊಸೆದು’ ಅದನ್ನು ಪ್ರಕಟಿಸುವುದಕ್ಕೂ ಮುನ್ನ ಸಾವಿರಾರು ಕೋಟಿ ಮೌಲ್ಯದ ಅದಾನಿ ಷೇರುಗಳನ್ನು ಶಾರ್ಟ್ ಸೆಲಿಂಗ್ ತಂತ್ರವನ್ನು ಅನುಸರಿಸುವ ಮೂಲಕ ಕುಸಿಯುವಂತೆ ಮಾಡಿ ಆನಂತರ ಕಡಿಮೆ ದರದಲ್ಲಿ ಅವುಗಳನ್ನು ಖರೀದಿಸುವ ಮುಖೇನ ಅಪಾರ ಲಾಭ ಮಾಡಿಕೊಳ್ಳುವ ಕ್ರಿಮಿನಲ್ ಪಿತೂರಿಯನ್ನು ಆಂಡರ್ಸನ್ ಮತ್ತು ಅವರ ಸಹವರ್ತಿಗಳು ನಡೆಸಿದ್ದಾರೆ ಎಂದು ವಕೀಲ ಎಂ ಎಲ್ ಶರ್ಮಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಲಾಗಿದೆ.

(ಶಾರ್ಟ್ ಸೆಲಿಂಗ್ ಎನ್ನುವುದು ಷೇರುಪೇಟೆಯಲ್ಲಿನ ಒಂದು ತಂತ್ರವಾಗಿದ್ದು, ನಿರ್ದಿಷ್ಟ ಷೇರುಗಳು ಕುಸಿಯುವುದನ್ನು ಮುಂಚಿತವಾಗಿಯೇ ಊಹಿಸಿದ ಹೂಡಿಕೆದಾರ ಅವುಗಳನ್ನು ಕಡಪಡೆದು ಮಾರಾಟ ಮಾಡಿ ಮುಂದೆ ಅವುಗಳ ಬೆಲೆ ಕುಸಿದಾಗ ಅಷ್ಟೇ ಪ್ರಮಾಣದ ಷೇರುಗಳನ್ನು ಮರಳಿಕೊಂಡು ಅದನ್ನು ಕಡನೀಡಿದವರಿಗೆ ಹಿಂದಿರುಗಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ ದೊರೆಯುವ ವ್ಯತ್ಯಾಸದ ಹಣದಿಂದ ಲಾಭ ಮಾಡಿಕೊಳ್ಳಲಾಗುತ್ತದೆ).

“ಭಾರತದ ನಾಗರಿಕ ಮೇಲಿನ ದಾಳಿಯ ಮೂಲಕ ಅವರು ನೂರಾರು ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಅದಾಗ್ಯೂ, ಅದಾನಿ ಸಮೂಹ ಸಂಸ್ಥೆಗಳ ಷೇರು ಮಾರಾಟವನ್ನು ಸೆಬಿಯು ಅಮಾನತಿನಲ್ಲಿ ಇಟ್ಟಿಲ್ಲ. ಇದರಿಂದಾಗಿ, ಶಾರ್ಟ್ ಸೆಲಿಂಗ್ ವಹಿವಾಟುದಾರರು ಮುಗ್ಧ ಹೂಡಿಕೆದಾರರ ಮೇಲ ದಾಳಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಶಾರ್ಟ್ ಸೆಲಿಂಗ್ ತಂತ್ರದಲ್ಲಿ ಆಂಡರ್ಸನ್ ಅವರು ಪರಿಣತಿ ಸಾಧಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಹೀಗಾಗಿ, ಆಂಡರ್ಸನ್ ಮತ್ತು ಅವರ ಸಹವರ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 420 (ವಂಚನೆ), 120-ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಬೇಕು ಎಂದು ಕೋರಲಾಗಿದೆ.

ನ್ಯಾಯದಾನ ದೃಷ್ಟಿಯಿಂದ ಆಂಡರ್ಸನ್ ಅವರ ಗಳಿಕೆಯನ್ನು ದಂಡದ ಜೊತೆಗೆ ವಸೂಲಿ ಮಾಡುವ ಮೂಲಕ ಹೂಡಿಕೆದಾರರಿಗೆ ಪರಿಹಾರದ ರೂಪದಲ್ಲಿ ಪಾವತಿಸಬಹುದಾಗಿದೆ ಎಂದು ಹೇಳಲಾಗಿದೆ. ಶಾರ್ಟ್ ಸೆಲಿಂಗ್ ಹೂಡಿಕೆದಾರರ ವಿರುದ್ಧ ವಂಚನೆಯಾಗಿದ್ದು, ಇದಕ್ಕೆ ಐಪಿಸಿ ಸೆಕ್ಷನ್ 420 ಜೊತೆಗೆ ಸೆಬಿ ಕಾಯಿದೆ ಸೆಕ್ಷನ್ 15ಎಚ್’ಎ ಅಡಿ ತನಿಖೆ ನಡೆಸಬೇಕು ಎಂದು ಶರ್ಮಾ ಕೋರಿದ್ದಾರೆ.