ಬೆಂಗಳೂರು: ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಹಿಂದೂಪರ ಕಾರ್ಯಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಇಬ್ಬರನ್ನು ಕಳೆದ ರಾತ್ರಿ ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.
ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿಯವರು ಚೈತ್ರಾ ಕುಂದಾಪುರ ಹೇಳಿದಂತೆ ಆಗಾಗ ಬೆಂಗಳೂರಿಗೆ ಬರುತ್ತಿದ್ದರು.
ಇಲ್ಲಿ ಚೈತ್ರಾ ಕುಂದಾಪುರ ಕೆಲವರನ್ನು ತೋರಿಸಿ ಇವರಿಗೆ ಹೈಕಮಾಂಡ್ ನಾಯಕರ ಜೊತೆ ನಿಕಟ ಸಂಪರ್ಕವಿದ್ದು, ಇವರು ಹೇಳಿದರೆ ಟಿಕೆಟ್ ಕೊಡಿಸುತ್ತಾರೆ ಎಂದು ಮಾತಿನ ಮೂಲಕ ಮರುಳು ಮಾಡಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿ ಅವರು ಟಿಕೆಟ್ ಸಿಗತ್ತೆ ಅನ್ನುವ ಆಸೆಗೆ ಕೇಳಿದಷ್ಟು ಹಣ ಕೊಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಕುಂದಾಪುರ ಒಟ್ಟು 4 ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದಾರೆ.
ಗೋವಿಂದಬಾಬು ಪೂಜಾರಿ ದೂರಿನ ಆಧಾರದ ಮೇಲೆ ಸದ್ಯ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.