ಇಂದೋರ್: ೫೦ ವರ್ಷಗಳ ಹಿಂದಿನ ಸಂಪ್ರದಾಯದಂತೆ ಹಿಂದೂ ಕುಟುಂಬವೊಂದು ಈದ್ ಉಲ್ ಪಿತ್ರ್ ಪ್ರಾರ್ಥನೆಗಾಗಿ ಖಾಜಿಯೊಬ್ಬರನ್ನು ಕುದುರೆ ಗಾಡಿಯಲ್ಲಿ ಮಸೀದಿಗೆ ಕರೆದೊಯ್ಯುವ ಮೂಲಕ ಕೋಮುಸೌಹಾರ್ದತೆಯನ್ನು ಸಾರಿತು.
ಮಧ್ಯಪ್ರದೇಶದ ಇಂದೋರ್ ನಗರದ ನಿವಾಸಿ ಸತ್ಯನಾರಾಯಣ ಸಲ್ವಾಡಿಯಾ ಅವರು ನಗರದ ಖಾಜಿ ಮೊಹಮ್ಮದ್ ಇಶ್ರತ್ ಆಲಿ ಅವರನ್ನು ಅವರ ರಾಜ್‌ಮೊಹಲ್ಲಾ ನಿವಾಸದಿಂದ ಸದಾರ್ ಬಜಾರ್‌ನಲ್ಲಿರುವ ಪ್ರಮುಖ ಮಸೀದಿಗೆ ಕುದುರೆ ಗಾಡಿಯಲ್ಲಿ ಕರೆದೊಯ್ದರು. ಪ್ರಾರ್ಥನೆ ಮುಗಿದ ಬಳಿಕ ಮನೆಗೆ ಮರಳಿಸಿದರು.
`ನನ್ನ ತಂದೆ ರಾಮಚಂದ್ರ ಸಲ್ವಾಡಿಯಾ ಅವರು ೫೦ ವರ್ಷಗಳ ಹಿಂದೆ ಈ ಪದ್ಧತಿಯನ್ನು ಆರಂಭಿಸಿದರು. ೨೦೧೭ರಲ್ಲಿ ಅವರು ತೀರಿಕೊಂಡ ಬಳಿಕ ನಾನು ಮುಂದುವರಿಸಿದ್ದೇನೆ. ಈ ಪದ್ಧತಿಯ ಮೂಲಕ ನಾವು ನಗರದ ಜನರಿಗೆ ಸಹೋದರತ್ವದ ಸಂದೇಶವನ್ನು ಸಾರಲು ಬಯಸುತ್ತೇವೆ’ ಎಂದು ಸತ್ಯನಾರಾಯಣ ಅವರು ಹೇಳಿದರು.
`ಖಾಜಿಯೊಬ್ಬರನ್ನು ಹಿಂದೂ ಕುಟುಂಬ ಗೌರವಯುತವಾಗಿ ಮಸೀದಿಗೆ ಕರೆದೊಯ್ಯುವುದು ಇಂದೋರ್‌ನಲ್ಲಿ ಮಾತ್ರ, ದೇಶದ ಬೇರೆ ಯಾವುದೇ ಭಾಗದಲ್ಲಿ ಈ ಸಂಪ್ರದಾಯ ಇಲ್ಲ’ ಎಂದು ಖಾಜಿ ಇಶ್ರತ್ ಹೇಳಿದರು.