ಮನೆ ರಾಜಕೀಯ ಹಿಂದೂ- ಮುಸ್ಲಿಂ ಒಡೆಯುವ ಕೆಲಸ: ಶಾಸಕ ಬಿ.ವೈ. ವಿಜಯೇಂದ್ರ

ಹಿಂದೂ- ಮುಸ್ಲಿಂ ಒಡೆಯುವ ಕೆಲಸ: ಶಾಸಕ ಬಿ.ವೈ. ವಿಜಯೇಂದ್ರ

0

ಬೆಳಗಾವಿ: ಈಗ ಜಾತಿ ಜನಗಣತಿ ಎಂದು ಹೇಳಿಕೊಂಡು ಹಿಂದೂ- ಮುಸಲ್ಮಾನರನ್ನು ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯನವರು ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯ ಸರಕಾರಕ್ಕೆ ಈ ಜಾತಿ ಜನಗಣತಿಗೆ ಅವಕಾಶ ಇಲ್ಲದಿದ್ದರೂ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು. ಬ್ರಿಟಿಷರ ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಯಶಸ್ವಿಯಾಗಿ ಅನುಸರಿಸುತ್ತಿದೆ. ನಮ್ಮ ರಾಜ್ಯದಲ್ಲೂ ಅದನ್ನು ನೋಡಿದ್ದೀರಿ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಅದರಲ್ಲಿ ವಿಫಲರಾದರು ಎಂದು ವಿಶ್ಲೇಷಿಸಿದರು.

 ಅಡ್ರೆಸ್ ಕಳಕೊಂಡ ಕಾಂಗ್ರೆಸ್ ಪಕ್ಷ.. ಇವತ್ತು ಬಾಬಾಸಾಹೇಬ ಡಾ.ಅಂಬೇಡ್ಕರರ ಹೆಸರು ಹೇಳುತ್ತಿದ್ದಾರೆ. ಅದೇರೀತಿ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷವು ಅಡ್ರೆಸ್ ಕಳಕೊಂಡಿದ್ದೇ ಇದಕ್ಕೆ ಕಾರಣ. 400ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷವು ವಿಪಕ್ಷದಲ್ಲಿ ಕೂರಲು ಕೂಡ ಪರದಾಡಬೇಕಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ಸಿನವರಿಗೆ ಈಗ ಬಾಬಾಸಾಹೇಬ ಡಾ.ಅಂಬೇಡ್ಕರರು, ಮುಸಲ್ಮಾನರೂ ನೆನಪಾಗುತ್ತಿದ್ದಾರೆ.

ಕಾಂಗ್ರೆಸ್ಸಿನವರು ಮುಸಲ್ಮಾನರನ್ನು ಮತಬ್ಯಾಂಕ್ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು. ಪರಿಶಿಷ್ಟ ಜಾತಿ- ಪಂಗಡದವರನ್ನು ಮತಬ್ಯಾಂಕ್ ರಾಜಕೀಯಕ್ಕೆ ಬಳಸಲು ಕೈಹಾಕಿದ್ದಾರೆಯೇ ವಿನಾ ಇದರಲ್ಲಿ ಕಾಂಗ್ರೆಸ್ ಪಕ್ಷದ್ದಾಗಲೀ ಸಿದ್ದರಾಮಯ್ಯನವರದ್ದಾಗಲೀ ಪ್ರಾಮಾಣಿಕತೆ ಇಲ್ಲ ಎಂದು ತಿಳಿಸಿದರು. 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಸಿದ್ದರಿಂದ ಕರ್ನಾಟಕವು ಅತ್ಯಂತ ದುಬಾರಿ ರಾಜ್ಯ ಎನಿಸಿದೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದೂ ಇದಕ್ಕೆ ಕಾರಣ ಎಂದು ತಿಳಿಸಿದರು. ಇದರಿಂದ ರಾಜ್ಯದ ಜನರು ಆಕ್ರೋಶದಲ್ಲಿದ್ದಾರೆ. ಸಿದ್ದರಾಮಯ್ಯನವರ ಒಡೆದಾಳುವ ನೀತಿ, ಬೆಲೆ ಏರಿಕೆ ನೀತಿ, ಪರಿಶಿಷ್ಟ ಜಾತಿ, ಪಂಗಡಗಳಿಗೆ ದ್ರೋಹ ಬಗೆದುದನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತಿದ್ದೇವೆ ಎಂದು ಹೇಳಿದರು.

ಸರಕಾರದಿಂದ ಬೂಟಾಟಿಕೆಯ ಹೇಳಿಕೆ…
ಜಾತಿ ಗಣತಿ ಸಂಬಂಧ ಮೀಸಲಾತಿ ಅನುಷ್ಠಾನ ಮಾಡುವುದೂ ಇಲ್ಲ; ಅದು ಸಾಧ್ಯವೂ ಇಲ್ಲ. 10 ವರ್ಷ ಕಳೆದ ಈ ವರದಿ ಹಳೆಯದು. ಹಿಂದುಳಿದ ಆಯೋಗದ ಪ್ರಕಾರವೂ 10 ವರ್ಷಕ್ಕೊಮ್ಮೆ ಇದಾಗಬೇಕು. ಅನುಷ್ಠಾನ ಸಂಬಂಧ ಹೇಳಿಕೆ ಕೇವಲ ಬೂಟಾಟಿಕೆ ಎಂದು ವಿಜಯೇಂದ್ರ ಅವರು ತಿಳಿಸಿದರು. ಜನಾಕ್ರೋಶ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ವಿವರಿಸಿದರು.