ಮನೆ ಅಂತಾರಾಷ್ಟ್ರೀಯ ಆಸ್ಟ್ರೇಲಿಯಾದಲ್ಲಿ ಕಿಡಿಗೇಡಿಗಳಿಂದ ಹಿಂದೂ ದೇಗುಲ ಧ್ವಂಸ; ಭಾರತ ಖಂಡನೆ

ಆಸ್ಟ್ರೇಲಿಯಾದಲ್ಲಿ ಕಿಡಿಗೇಡಿಗಳಿಂದ ಹಿಂದೂ ದೇಗುಲ ಧ್ವಂಸ; ಭಾರತ ಖಂಡನೆ

0

ಮೆಲ್ಬರ್ನ್‌: ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ, ಖಲಿಸ್ತಾನ್‌ ಪರ ಕಿಡಿಗೇಡಿಗಳು ನಡೆಸುತ್ತಿರುವ ಕೃತ್ಯವನ್ನು ಭಾರತ ಖಂಡಿಸಿದೆ.

ಭಾರತ ಮತ್ತು ಆಸ್ಟ್ರೇಲಿಯನ್‌ ಸಮುದಾಯದ ನಡುವೆ ದ್ವೇಷಬಿತ್ತುವ ಕೃತ್ಯ ಇದಾಗಿದ್ದು, ಈ ಆತಂಕಕಾರಿ ಬೆಳವಣಿಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಸ್ಟ್ರೇಲಿಯಾ ಸರ್ಕಾರವನ್ನು ಆಗ್ರಹಿಸಿದೆ.

ಕಳೆದ ತಿಂಗಳಿಂದ ಇಲ್ಲಿಯವರೆಗೆ, ಇಲ್ಲಿನ ಸ್ವಾಮಿನಾರಾಯಣ ಹಾಗೂ ಇಸ್ಕಾನ್‌ ದೇವಸ್ಥಾನ, ಕಾರಂ ಡೌನ್ಸ್‌’ನಲ್ಲಿರುವ ಐತಿಹಾಸಿಕ ಶಿವ–ವಿಷ್ಣು ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದು, ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ.

ಭಾರತ ವಿರೋಧಿ ಭಯೋತ್ಪಾದಕರನ್ನು ವೈಭವೀಕರಿಸಿ, ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುವುದನ್ನು ನಿರ್ಭೀಡೆಯಿಂದ, ಪದೇ ಪದೇ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಎಚ್ಚರಿಕೆ ಗಂಟೆಯಾಗಿದೆ ಎಂದು ಕ್ಯಾನ್‌ಬೆರಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ಖಾಲಿಸ್ತಾನಿ ಬೆಂಬಲಿಗರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸಿಖ್ಸ್‌ ಫಾರ್‌ ಜಸ್ಟೀಸ್‌ (ಎಸ್‌’ಎಫ್‌’ಜೆ) ಎನ್ನುವ ನಿಷೇಧಿತ ಭಯೋತ್ಪಾದನಾ ಸಂಸ್ಥೆ ಹಾಗೂ ಆಸ್ಟ್ರೇಲಿಯಾದ ಹೊರಗೆ ಇರುವ ಇಂಥ ಸಂಸ್ಥೆಗಳು ಈ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಭಾರತ ಆರೋಪಿಸಿದೆ.

ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿರುವ ಘಟನೆಗಳಿಂದ ಆಘಾತವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಭಾರ ಕಚೇರಿಯು ಹೇಳಿದೆ.